ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಮತ್ತು ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಂಯೋಜನೆಯೊಂದಿಗೆ, ಚಿಕ್ಕೋಡಿಯ ಪ್ರತಿಷ್ಠಿತ ಸಿ.ಎಲ್.ಇ. ಪದವಿ ಕಾಲೇಜಿನಲ್ಲಿ ಈ ಭಾಗದಲ್ಲೇ ಪ್ರಥಮ ಬಾರಿಗೆ ಹೊಸ “ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್” ಉದ್ಯೋಗಾಧಾರಿತ ಕೋರ್ಸ್ ಅನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಜಗದೀಶ ಕವಟಗಿಮಠ ತಿಳಿಸಿದರು.

ಇಂದು ನಗರದ ಸಿ.ಎಲ್.ಇ. ಸಂಸ್ಥೆಯ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಮುಂದುವರಿದು ಮಾತನಾಡಿದ ಅವರು, ಇದೊಂದು ೩ ವರ್ಷಗಳ ಅಧಿಕೃತ ಪದವಿ ಕೋರ್ಸ್ ಆಗಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅತ್ಯಂತ ಉಪಯುಕ್ತವಾಗಲಿದೆ ಎಂದರು.
ಈ ಕೋರ್ಸ್ನಲ್ಲಿ ಹೋಟೆಲ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್, ಫುಡ್ ಅಂಡ್ ಬೇವರೆಜ್ ಸರ್ವಿಸ್, ಫ್ರಂಟ್ ಆಫೀಸ್ ಮ್ಯಾನೇಜ್ಮೆಂಟ್, ಹೌಸ್ಕೀಪಿಂಗ್, ಫುಡ್ ಪ್ರೊಡಕ್ಷನ್, ಕಸ್ಟಮರ್ ಸರ್ವಿಸ್ ಮತ್ತು ವ್ಯಕ್ತಿತ್ವ ವಿಕಸನ, ಆಹಾರ ಉತ್ಪಾದನಾ ಘಟಕಗಳಿಗೆ ಭೇಟಿ, ಪ್ರಾಕ್ಟಿಕಲ್ ತರಬೇತಿ ಮತ್ತು ವಿಶೇಷ ವೃತ್ತಿಮಾರ್ಗದರ್ಶನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು.
೩ ವರ್ಷಗಳ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಭಾರತ ಹಾಗೂ ವಿದೇಶಗಳಲ್ಲಿನ ಹೋಟೆಲ್ಗಳು, ರೆಸಾರ್ಟ್ಗಳು, ಪ್ರವಾಸೋದ್ಯಮ ಕ್ಷೇತ್ರ, ವಿಮಾನಯಾನ ಮತ್ತು ಅತಿಥಿ ಸತ್ಕಾರ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ವಿದ್ಯಾರ್ಥಿಗಳು ಸ್ವಂತ ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಅಥವಾ ಬೇಕರಿ ಉದ್ಯಮದಂತಹ ಸ್ವಯಂ ಉದ್ಯೋಗವನ್ನೂ ಪ್ರಾರಂಭಿಸಬಹುದು.
ಈ ಕೋರ್ಸ್ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ಎಂ.ಬಿ.ಎ, ಎಂ.ಕಾಂ, ಎಂ.ಸಿ.ಎ ನಂತಹ ಸ್ನಾತಕೋತ್ತರ ಪದವಿಗಳಿಗೆ ಅರ್ಹರಾಗುತ್ತಾರೆ. ಜೊತೆಗೆ ಪದವೀಧರರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್, ಪಿ.ಎಸ್.ಐ, ಪಿ.ಡಿ.ಒ, ಐ.ಬಿ.ಪಿ.ಎಸ್ ನಂತಹ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅರ್ಜಿ ಸಲ್ಲಿಸಬಹುದು.
ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಹಾಗೂ ಅವರನ್ನು ಉದ್ಯೋಗಕ್ಷಮರನ್ನಾಗಿ ಮಾಡಲು ಈ ಕೋರ್ಸ್ ಪ್ರಾರಂಭಿಸಲಾಗಿದೆ. ಯಾವುದೇ ವಿಭಾಗದಲ್ಲಿ ಶೇ. 45 ರಷ್ಟು ಅಂಕಗಳೊಂದಿಗೆ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಪದವಿ ಕೋರ್ಸ್ಗೆ ಪ್ರವೇಶ ಪಡೆಯಬಹುದು.
ಇದರಿಂದ ಯುವಕರಿಗೆ ಉದ್ಯೋಗಾವಕಾಶಗಳು ಸಿಗಲಿವೆ. ಚಿಕ್ಕೋಡಿ ಮತ್ತು ಸುತ್ತಮುತ್ತಲಿನ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು.
ಈ ಕೋರ್ಸ್ ಆರಂಭಿಸಲು ವಿಶೇಷವಾಗಿ ನೆರವಾದ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಅವರಿಗೆ ಸಂಸ್ಥೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಚೇರಿಯನ್ನು ಸಂಪರ್ಕಿಸಬೇಕು” ಎಂದು ಜಗದೀಶ್ ಎಂ. ಕವಟಗಿಮಠ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಶ್ರೀಕಾಂತ್ ಚನ್ನವರ, ಉಪಕಾರ್ಯದರ್ಶಿ ಎನ್.ಎಸ್. ವಂಟಮುರೆ, ನಿರ್ದೇಶಕ ಮಹಾಂತೇಶ ಭಾತೆ, ಶಿವಾನಂದ ಚೋನ್ನದ, ಎಸ್.ಎಸ್. ಪಾಟೀಲ, ಮಲ್ಲಿಕಾರ್ಜುನ ಕವಟಗಿಮಠ, ಆಡಳಿತಾಧಿಕಾರಿ ಸಾಗರ ಬಿಸ್ಕೋಪ, ಪ್ರಾಂಶುಪಾಲ ಎಸ್.ಎಸ್. ಮೆಟಗೂಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
