ಒಂದೆಡೆ ಬೇಸಿಗೆ ಬಂದರೆ ಕರ್ನಾಟಕಕ್ಕೆ ಹರಿಯುವ ಕೃಷ್ಣಾ ನದಿಗೆ ನೀರು ಬಿಡದೆ ಆಟವಾಡಿಸುವ ಮಹಾರಾಷ್ಟ್ರ ಸರ್ಕಾರ, ಇದೀಗ ಮತ್ತೊಂದು ವಿವಾದಾತ್ಮಕ ಹೆಜ್ಜೆಯಿಟ್ಟಿದೆ. ಕರ್ನಾಟಕದ ಪಾಲಿನ ಕೃಷ್ಣಾ ನದಿ ನೀರನ್ನು ಅಕ್ರಮವಾಗಿ ತನ್ನ ರಾಜ್ಯದ ಇಚಲಕರಂಜಿಗೆ ಒಯ್ಯುವ ಬೃಹತ್ ಯೋಜನೆಯನ್ನು ರೂಪಿಸಿದ್ದು, ಗಡಿ ಭಾಗದ ಜನರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.


ಮಹರಾಷ್ಟ್ರದ ಇಚಲಕರಂಜಿ ನಗರದ ಪಕ್ಕದಲ್ಲೇ ದೂಧಗಂಗಾ ನದಿ ಹರಿಯುತ್ತಿದ್ದರೂ, ಅದನ್ನು ಬಿಟ್ಟು ಸುಮಾರು 30 ಕಿ.ಮೀ. ದೂರದ ದಾನವಾಡ ಬಳಿ ಜಾಕ್‌ವೆಲ್ ನಿರ್ಮಿಸಿ 4 ಟಿಎಂಸಿ ನೀರು ಕೊಂಡೊಯ್ಯುವ ‘ರಾಧಾಕೃಷ್ಣ ನೀರಾವರಿ ಯೋಜನೆ’ಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈಗಾಗಲೇ ಘೋಷಿಸಿದ್ದಾರೆ.
ಮಹಾರಾಷ್ಟ್ರದ ದಾನವಾಡದಿಂದ ಕೇವಲ 1 ಕಿ.ಮೀ. ದೂರದಲ್ಲಿರುವ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕರ್ನಾಟಕ ಸರ್ಕಾರ ಬ್ಯಾರೇಜ್ ನಿರ್ಮಿಸಿದೆ. ಈ ಬ್ಯಾರೇಜ್‌ನಲ್ಲಿ 1.5 ಟಿಎಂಸಿ ನೀರು ಸಂಗ್ರಹವಾಗುತ್ತಿದ್ದು, ಇದು ಚಿಕ್ಕೋಡಿ ತಾಲೂಕಿನ ನೂರಾರು ಹೆಕ್ಟೇರ್ ಕೃಷಿ ಭೂಮಿಗೆ ಹಾಗೂ ಚಿಕ್ಕೋಡಿ ಪಟ್ಟಣ ಸೇರಿದಂತೆ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ.
ಈ ಬ್ಯಾರೇಜ್‌ನ ಹಿನ್ನೀರು ವ್ಯಾಪಿಸಿರುವ ದಾನವಾಡ ಬಳಿ ಕೃಷ್ಣಾ ಹಾಗೂ ದೂಧಗಂಗಾ ನದಿಗಳು ಸಂಗಮವಾಗುತ್ತವೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಮಹಾರಾಷ್ಟ್ರ ಸರ್ಕಾರ, ದಾನವಾಡ ಬಳಿ ಬೃಹತ್ ಜಾಕ್‌ವೆಲ್ ನಿರ್ಮಿಸಿ ನೀರು ಸಾಗಿಸಲು ಸಂಚು ರೂಪಿಸಿದೆ. ಈ ಯೋಜನೆ ಅನುಷ್ಠಾನಗೊಂಡರೆ ಕಲ್ಲೋಳ ಬ್ಯಾರೇಜ್‌ಗೆ ತೀವ್ರ ನೀರಿನ ಕೊರತೆ ಎದುರಾಗಲಿದ್ದು, ಗಡಿ ಭಾಗದ ನೂರಾರು ಹಳ್ಳಿಗಳು ದಾಹದಿಂದ ಬಳಲುವಂತಾಗುತ್ತದೆ.
ಮಹಾರಾಷ್ಟ್ರ ಸರ್ಕಾರ ಅಂತಾರಾಜ್ಯ ನೀರು ಹಂಚಿಕೆ ನಿಯಮಗಳನ್ನು ಸಂಪೂರ್ಣವಾಗಿ ಮೀರಿ ಇಷ್ಟೊಂದು ದೊಡ್ಡ ಮಟ್ಟದ ಯೋಜನೆಗೆ ಚಾಲನೆ ನೀಡಿದ್ದರೂ, ಕರ್ನಾಟಕ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ಗಡಿ ಭಾಗದ ಜನರನ್ನು ಕೆರಳಿಸಿದೆ.
ಈ ಯೋಜನೆಯನ್ನು ಖಂಡಿಸಿ ಹಾಗೂ ಕರ್ನಾಟಕ ಸರ್ಕಾರದ ಮೌನವನ್ನು ವಿರೋಧಿಸಿ, ನಾಳೆಯಿಂದ ಕಲ್ಲೋಳ ಕೃಷ್ಣಾ ನದಿ ತೀರದಲ್ಲಿ ‘ಕಿತ್ತೂರು ಕರ್ನಾಟಕ ಸೇನೆ’ಯ ಕಾರ್ಯಕರ್ತರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಗಡಿ ಭಾಗದ ಕನ್ನಡಿಗರ ಜಲ ಹಕ್ಕನ್ನು ಕಸಿಯಲು ಹೊರಟಿರುವ ಮಹಾರಾಷ್ಟ್ರ ಸರ್ಕಾರದ ಕುತಂತ್ರಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಕಾನೂನು ಹಾಗೂ ರಾಜಕೀಯ ಮಟ್ಟದಲ್ಲಿ ಸೂಕ್ತ ಉತ್ತರ ನೀಡಬೇಕಿದೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ನದಿ ತೀರದ ಗ್ರಾಮಗಳು ಭೀಕರ ನೀರಿನಾಹಾಕಾರ ಎದುರಿಸಬೇಕಾಗುತ್ತದೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ
