Uncategorized

ಉಗಾರದಲ್ಲಿ ವಿಜೃಂಭಣೆಯ ಆಷಾಢಿ ಏಕಾದಶಿ: ಕೃಷ್ಣಾ ನದಿಯಲ್ಲಿ ವೀಣಾ ಪೂಜೆ, ಭಕ್ತಿಪೂರ್ವಕ ದಿಂಡಿ ಮಹೋತ್ಸವ

Share

ಆಷಾಢಿ ಏಕಾದಶಿಯ ಅಂಗವಾಗಿ ಉಗಾರದಲ್ಲಿ ಶ್ರೀ ಸಂತ ಜ್ಞಾನೇಶ್ವರ ಮಾವುಲಿ ಭಜನಾ ಮಂಡಳಿಯ ವಿಠ್ಠಲ ಭಕ್ತರು ಹಾಗೂ ವಾರಕರಿ ಮಂಡಳಿಯ ಸದಸ್ಯರು ಒಂದಾಗಿ ಸೇರಿ ಭಕ್ತಿಭಾವದಿಂದ ಶ್ರೀ ಕೃಷ್ಣಾ ನದಿಯಲ್ಲಿ ವೀಣಾ ಪೂಜೆ ನೆರವೇರಿಸಿದರು. ಸುಮಾರು 400ಕ್ಕೂ ಹೆಚ್ಚು ಭಕ್ತರು ಭಜನೆ, ಭಾರೂಡ, ಫುಗಡಿ ಹಾಗೂ ರಿಂಗಣ ಕಾರ್ಯಕ್ರಮಗಳಲ್ಲಿ ತಲ್ಲೀನರಾಗಿ, ದಿಂಡಿಯ ಮೂಲಕ ವಿಠ್ಠಲ-ರುಕ್ಮಿಣಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಷಾಢಿ ಏಕಾದಶಿಯನ್ನು ಭಕ್ತಿಪೂರ್ವಕವಾಗಿ ಆಚರಿಸಿದರು.

ಶನಿವಾರ ಬೆಳಿಗ್ಗೆ ಸಂತ ಜ್ಞಾನೇಶ್ವರ ಮಾವುಲಿ ಭಜನಾ ಮಂಡಳಿಯ ಅಧ್ಯಕ್ಷ ಸಂಜಯ್ ಬಾಗಡಿ ಹಾಗೂ ಇತರ ಭಕ್ತರ ಉಪಸ್ಥಿತಿಯಲ್ಲಿ ವೀಣಾ ಪೂಜೆ ನೆರವೇರಿಸಿ, ದಿಂಡಿಯೊಂದಿಗೆ ವಿಠ್ಠಲ-ರುಕ್ಮಿಣಿ ದೇವಸ್ಥಾನದತ್ತ ಪಾದಯಾತ್ರೆ ಆರಂಭಿಸಲಾಯಿತು.

ಉಗಾರದಲ್ಲಿ ಆಷಾಢಿ ಏಕಾದಶಿಯ ಅಂಗವಾಗಿ ಈ ದಿಂಡಿ ಮೂರನೇ ವರ್ಷ ನಡೆಯುತ್ತಿದ್ದು, ಕಾರ್ತಿಕಿ ವಾರಿಯ 25ನೇ ವರ್ಷದ ಆಚರಣೆಯಾಗಿದೆ ಎಂದು ಆಯೋಜಕರು ತಿಳಿಸಿದರು.

ವಿಠ್ಠಲ-ರುಕ್ಮಿಣಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಚಂದನ್ ಸಾಹೇಬ ಶಿರಗಾವ್ಕರ್ ಹಾಗೂ ಕಾರ್ಯದರ್ಶಿ ಜಗದೀಶ್ ಪಟವರ್ಧನ್ ಅವರ ಮುಖ್ಯ ಉಪಸ್ಥಿತಿಯಲ್ಲಿ ದೇವಸ್ಥಾನದಲ್ಲಿ ವಿಧಿವತ್ತಾಗಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಜಗದೀಶ್ ಪಟವರ್ಧನ್ ಹಾಗೂ ವಿನಾಯಕ ಕಾಂಬಳೆ ಆರತಿ ಸಲ್ಲಿಸಿದರು.

ಜ್ಞಾನೇಶ್ವರ ಮಾವುಲಿ ಭಜನಾ ಮಂಡಳಿಯ ಪ್ರಮುಖರಾದ ಸಂಜಯ್ ಬಾಗಡಿ, ದಿಲೀಪ್ ಶಿಂಧೆ, ನೇತಾಜಿ ಸೂರ್ಯವಂಶಿ, ಶಿವಾ ತಳವಾರ, ಶಾಮಾ ಶಿಂಧೆ, ಶ್ರಾವಣ ಕಾಂಬಳೆ, ಉದಯ ಕುಲಕರ್ಣಿ, ಸದಾಶಿವ ಚಲವಾದಿ, ನೇತಾಜಿ ಶಿಂಧೆ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮಹಿಳಾ ಭಕ್ತರಾದ ಉಜ್ವಲಾ ಢೆರೆ, ಮಾಲಾ ಕಾಂಬಳೆ, ಆರತಿ, ಯಲ್ಲವ್ವ, ನಿರ್ಮಲಾ ಸೇರಿದಂತೆ ಅನೇಕ ವಿಠ್ಠಲ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು.

ವೀರಭದ್ರ ಕಟಗಿರಿ, ದಿಲೀಪ್ ಪಾಚಕಟೆ, ಸಿದ್ದು ಆಗಸನಾಳ, ಪಾಂಡು ಪತಂಗೆ, ಗಜಾನನ ಥೋರಸೆ, ಆದಿನಾಥ ಪತಂಗೆ ಸೇರಿದಂತೆ ನೂರಾರು ವಿಠ್ಠಲ ಭಕ್ತರು ಆಷಾಢಿ ಏಕಾದಶಿಯ ಅಂಗವಾಗಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

– ಇನ್ ನ್ಯೂಸ್ ಕಾಗವಾಡ

Tags:

error: Content is protected !!