ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಇಂದು ಕೋಟ್ಯಂತರ ಭಕ್ತರ ಆರಾಧ್ಯ ದೈವ ಪಂಢರಪುರದ ಪಾಂಡುರಂಗನ ದರ್ಶನಕ್ಕೆ ಭಕ್ತಿಪರಡೇ ಹರಿದುಬಂದಿದೆ. ಲಕ್ಷಾಂತರ ವಾರಕರಿಗಳ ಭಜನೆ, ಹರಿನಾಮ ಸ್ಮರಣೆಯೊಂದಿಗೆ ಪಂಢರಪುರವೇ ಸಂಪೂರ್ಣ ಭಕ್ತಿಸಾಗರದಲ್ಲಿ ಮುಳುಗಿದೆ.


ಆಷಾಢ ಏಕಾದಶಿಯ ಸಾಂಪ್ರದಾಯಿಕ ಪದ್ಧತಿಯಂತೆ ಇಂದು ನ ಮುಂಜಾನೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವಿಂದ್ರ ಫಡ್ನವೀಸ್ ಅವರು ತಮ್ಮ ಧರ್ಮಪತ್ನಿಯೊಂದಿಗೆ ಶ್ರೀ ವಿಠ್ಠಲ ಮತ್ತು ರುಕ್ಮಿಣಿ ಮಾತೆಯ ಸರ್ಕಾರಿ ಮಹಾಪೂಜೆಯನ್ನು ನೆರವೇರಿಸಿದರು. ಈ ವರ್ಷದ ಮಹಾಪೂಜೆಯ ಮುಖ್ಯ ಗೌರವ ಧಾರಾಶಿವ್ ಜಿಲ್ಲೆಯ ಕಳಂಬ ತಾಲೂಕಿನ ಗೌರ್‌ಗಾಂವ್‌ನ ರೈತ ದಂಪತಿಗಳಾದ ಬಾಳಾಸಾಹೇಬ್ ಮಾಧವ್ ಮಾನೆ ಮತ್ತು ಪ್ರಭಾವತಿ ಬಾಳಾಸಾಹೇಬ್ ಮಾನೆ ಅವರಿಗೆ ದೊರೆತಿದ್ದು, ಅವರು ಮುಖ್ಯಮಂತ್ರಿಗಳೊಂದಿಗೆ ಪೂಜೆಯಲ್ಲಿ ಪಾಲ್ಗೊಂಡರು. ಪೂಜೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, “ತಮ್ಮ ಭಕ್ತನಿಗಾಗಿ ಇಟ್ಟಿಗೆಯ ಮೇಲೆ ನಿಂತಿರುವ ಪಾಂಡುರಂಗನಿಗೆ ಶಿರಬಾಗುತ್ತೇನೆ, ಇದು ನನ್ನ ಪೂಜೆಯಲ್ಲ, ಕೋಟ್ಯಂತರ ವಿಠ್ಠಲ ಭಕ್ತರು ಮತ್ತು ವಾರಕರಿಗಳ ಪೂಜೆ” ಎಂದು ಭಾವಪೂರ್ಣವಾಗಿ ಹೇಳಿದರು.

ದೇವರ ದರ್ಶನಕ್ಕಾಗಿ ಪ್ರಸ್ತುತ ೨೫ ಕಿಲೋಮೀಟರ್‌ಗೂ ಹೆಚ್ಚು ಉದ್ದದ ಸಾಲು ನಿರ್ಮಾಣವಾಗಿದ್ದು, ಆಗಮಿಸುವ ಪ್ರತಿಯೊಬ್ಬ ವಾರಕರಿಗೂ ಸೂಕ್ತ ಸೌಲಭ್ಯ ಸಿಗುವಂತೆ ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು. ಪ್ರಕೃತಿಯನ್ನು ನಂಬಿ ಬದುಕುವ ವಾರಕರಿಯೇ ರೈತನಾಗಿದ್ದು, ಸರ್ಕಾರ ಈ ವರ್ಷ ೫೬ ಲಕ್ಷ ರೈತರ ಸಾಲ ಮನ್ನಾ ಮಾಡಿದೆ ಹಾಗೂ ವಿದ್ಯುತ್ ಬಿಲ್ ಮನ್ನಾ ಮಾಡುವ ಮೂಲಕ ಅವರ ಜೊತೆಗೆ ನಿಂತಿದೆ ಎಂದರು. ಎಷ್ಟೇ ಲಕ್ಷ ಭಕ್ತರು ಬಂದರೂ ದರ್ಶನಕ್ಕಾಗಿ ಸೂಕ್ತ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದ ಅವರು, ಪ್ರತಿಯೊಬ್ಬರಿಗೂ ಪಾಂಡುರಂಗನ ಕೃಪೆ ದೊರೆಯಲಿ ಎಂದು ಹಾರೈಸಿದರು.

