ಸಂಪುಟ ವಿಸ್ತರಣೆ ಮತ್ತು ಯಾರಿಗೆ ಸ್ಥಾನ ನೀಡಬೇಕು ಎಂಬುದು ಪಕ್ಷದ ಅಂತಿಮ ನಿರ್ಧಾರಕ್ಕೆ ಒಳಪಟ್ಟಿದ್ದು. ಪಕ್ಷಕ್ಕೆ ಯಾರು ಅನಿವಾರ್ಯವೋ ಅವರಿಗೆ ಖಂಡಿತ ಸ್ಥಾನ ನೀಡಲಾಗುತ್ತದೆ. ಸವದಿ ಅವರಿಗೂ ನೀಡಬಹುದು ಅಥವಾ ಬೇರೆಯವರಿಗೂ ನೀಡಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

2028ರಲ್ಲಿ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರ ಪುತ್ರಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ನೀಡಿದ್ದ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, “2028 ಬಂದಾಗ ಆ ಬಗ್ಗೆ ನೋಡೋಣ, ಈಗಲೇ ಆ ಬಗ್ಗೆ ಚರ್ಚೆ ಬೇಡ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಇನ್ನು ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರವಾಗಿ ಮಾತನಾಡಿ, “ನಾವು ಯಾವುದೇ ಕಾರಣಕ್ಕೂ ಡಿಸಿಎಂ ಹುದ್ದೆ ಬೇಕು ಎಂದು ಬೇಡಿಕೆ ಇಟ್ಟಿಲ್ಲ. ಪಕ್ಷದ ಹೈಕಮಾಂಡ್ ಈ ಬಗ್ಗೆ ಎಲ್ಲವನ್ನೂ ತೀರ್ಮಾನಿಸುತ್ತದೆ” ಎಂದು ಸ್ಪಷ್ಟಪಡಿಸಿದರು.
ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಸಂಪುಟ ವಿಸ್ತರಣೆ ಮತ್ತು ಯಾರಿಗೆ ಸ್ಥಾನ ನೀಡಬೇಕು ಎಂಬುದು ಪಕ್ಷದ ಅಂತಿಮ ನಿರ್ಧಾರಕ್ಕೆ ಒಳಪಟ್ಟಿದ್ದು. ಪಕ್ಷಕ್ಕೆ ಯಾರು ಅನಿವಾರ್ಯವೋ ಅವರಿಗೆ ಖಂಡಿತ ಸ್ಥಾನ ನೀಡಲಾಗುತ್ತದೆ. ಸವದಿ ಅವರಿಗೂ ನೀಡಬಹುದು ಅಥವಾ ಬೇರೆಯವರಿಗೂ ನೀಡಬಹುದು, ಈ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು” ಎಂದರು.
ಇದೇ ವೇಳೆ ದೆಹಲಿಯಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷಾ ಅಕ್ರಮದ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸಚಿವರು ಆಕ್ರೋಶ ಹೊರಹಾಕಿದರು. “ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಪ್ರತಿಷ್ಠೆ ಬದಿಗಿಟ್ಟು ಮೊದಲೇ ಸ್ಪಂದಿಸಬೇಕಿತ್ತು. ಪರೀಕ್ಷೆಯಲ್ಲಿ ಆಗಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಬೇಕು. ಪ್ರತಿಭಟನಾನಿರತರನ್ನು ಕರೆದು ಚರ್ಚಿಸಿ, ಸಮಸ್ಯೆಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬೇಕಿತ್ತು. ಈ ಗೊಂದಲಕ್ಕೆ ಯಾರಾದರೂ ಒಬ್ಬರು ಜವಾಬ್ದಾರಿ ಹೊರಲೇಬೇಕು” ಎಂದು ಆಗ್ರಹಿಸಿದರು.
