ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸುಳಿವು ನೀಡಿದ್ದಾರೆ. ಬೆಂಗಳೂರು ಟೆಕ್ ಸಮಿಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ಸಿದ್ಧತೆಗಳ ಕುರಿತು ಹಾಗೂ ರಾಜ್ಯದ ತಾಂತ್ರಿಕ ಅಭಿವೃದ್ಧಿಯ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಹಂಚಿಕೊಂಡಿದ್ದಾರೆ.

ಬೆಂಗಳೂರು ಟೆಕ್ ಸಮಿಟ್ ಯಶಸ್ಸಿನ ಕುರಿತು ಹರ್ಷ ವ್ಯಕ್ತಪಡಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರಾಜ್ಯದ ಉದ್ಯೋಗಾವಕಾಶ ಹಾಗೂ ಯುವಜನತೆಯ ಭವಿಷ್ಯಕ್ಕಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಹೊಸ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದರು. ಇದಕ್ಕಾಗಿ ಶೈಕ್ಷಣಿಕ ಪಠ್ಯಕ್ರಮದಲ್ಲೂ (Curriculum) ಅಗತ್ಯ ಬದಲಾವಣೆ ಹಾಗೂ ತರಬೇತಿಗಳನ್ನು ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಜಾಗತಿಕ ಮಟ್ಟದ ಉದ್ಯಮಿಗಳು ಹಾಗೂ ಸಿಇಒಗಳು ಕರ್ನಾಟಕದೊಂದಿಗೆ ಕೈಜೋಡಿಸುತ್ತಿದ್ದು, ಮುಂದಿನ ಬೆಂಗಳೂರು ಟೆಕ್ ಸಮಿಟ್ ವೇಳೆಗೆ ರಾಜ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಒಟ್ಟಾಗಿ ಶ್ರಮಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಇದೇ ವೇಳೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ತಮಿಳುನಾಡು ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಪ್ರಸ್ತುತ ಸಂಪುಟ ವಿಸ್ತರಣೆ ಹಾಗೂ ರಾಜಕೀಯ ವಿಷಯಗಳ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. ಈ ಹಿಂದಿನ ವಾರಗಳಲ್ಲಿ ತಾವು ಸಂಪುಟ ವಿಸ್ತರಣೆಯ ಕಾರ್ಯಗಳಲ್ಲಿ ತೀವ್ರ ಬ್ಯುಸಿಯಾಗಿದ್ದು, ಪ್ರತಿಯೊಬ್ಬರೊಂದಿಗೂ ಚರ್ಚಿಸಿ ಮುಕ್ತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ರಾಜ್ಯದ ಭವಿಷ್ಯ ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಅವರು ಇದೇ ವೇಳೆ ಹೇಳಿದರು.
