ವಿಜಯನಗರ ಜಿಲ್ಲೆಯ ಹಡಗಲಿ ಪಟ್ಟಣದ ಜಿಬಿಆರ್ ಕಾಲೇಜು ಮುಂಭಾಗ ಬೆಳ್ಳಂಬೆಳಿಗ್ಗೆ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಸಿಎನ್‌ಜಿ ಇಂಧನ ಸಾಗಿಸುತ್ತಿದ್ದ ವಾಹನದಲ್ಲಿ ಇದ್ದಕ್ಕಿದ್ದಂತೆ ಗ್ಯಾಸ್ ಸೋರಿಕೆಯಾಗಿದ್ದರಿಂದ ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಹಡಗಲಿಯ ಜಿಬಿಆರ್ ಕಾಲೇಜು ರಸ್ತೆಯಲ್ಲಿ ಸಿಎನ್‌ಜಿ ಇಂಧನ ಹೊತ್ತೊಯ್ಯುತ್ತಿದ್ದ ವಾಹನದಲ್ಲಿ ದಿಢೀರ್ ಇಂಧನ ಸೋರಿಕೆಯಾಗಲು ಪ್ರಾರಂಭವಾಯಿತು. ಇದನ್ನು ಕಂಡು ಸುತ್ತಮುತ್ತಲ ಸಾರ್ವಜನಿಕರು ಹಾಗೂ ಹಾದಿಹೋಕರು ತೀವ್ರ ಆತಂಕಗೊಂಡು ಬೆಚ್ಚಿಬಿದ್ದರಲ್ಲದೆ, ಘಟನೆಯನ್ನು ಕುತೂಹಲದಿಂದ ನೋಡಲು ವಾಹನದ ಬಳಿ ಸಾರ್ವಜನಿಕರ ಜನಸ್ತೋಮವೇ ನೆರೆದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಇಂಧನ ಸೋರಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಸಮಯಪ್ರಜ್ಞೆಯಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
