ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನವದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಘಟನೆಯನ್ನು ವಿರೋಧಿಸಿ, ಸದಲಗಾ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.


ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಾಮಾಜಿಕ, ಶೈಕ್ಷಣಿಕ ಯುವ ಸಂಘ, ಭೀಮ್ ಆರ್ಮಿ, ರೈತಪರ ಸಂಘಟನೆಗಳು ಹಾಗೂ ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಂಟಿ ಆಶ್ರಯದಲ್ಲಿ ಈ ಬೃಹತ್ ಹೋರಾಟ ನಡೆಯಿತು.
ಪಟ್ಟಣದ ಕುವೆಂಪು ಶತಮಾನೋತ್ಸವ ಶಾಲಾ ಆವರಣದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ನಾಡಕಚೇರಿಗೆ ತೆರಳಿ ಉಪತಹಸೀಲ್ದಾರ್ ಪಿ.ಬಿ. ಸಿರಿವಂತ ಅವರ ಮೂಲಕ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಮನವಿ ಪತ್ರ ರವಾನಿಸಿದರು.
ವಿದ್ಯಾರ್ಥಿಗಳ ಮೇಲೆ ನಡೆದಿರುವ ಗಂಭೀರ ಲಾಠಿ ಪ್ರಹಾರದ ಕುರಿತು ಪಾರದರ್ಶಕ ತನಿಖೆ ತಕ್ಷಣವೇ ನಡೆಯಬೇಕು ಎಂದು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಾಮಾಜಿಕ ಹಾಗೂ ಶೈಕ್ಷಣಿಕ ಯುವ ಸಂಘದ ಅಧ್ಯಕ್ಷ ಅರ್ಜುದ್ದಿನ್ ಶೇಖಜಿ ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರಾದ ಸಂತೋಷ ನವಲೆ, ಸಚಿನ ಮಾಳಗೆ ಹಾಗೂ ತುಷಾರ ಕಾಂಬಳೆ ತಮ್ಮ ಭವಿಷ್ಯಕ್ಕಾಗಿ ನ್ಯಾಯಯುತವಾಗಿ ಮತ್ತು ಕಾನೂನುಬದ್ಧವಾಗಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿ, ಅವರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗಿದೆ” ಎಂದು ಕಟುವಾಗಿ ದೂರಿದರು.
ಈ ಪ್ರತಿಭಟನೆಯಲ್ಲಿ ಮರಾಠ ಸಮಾಜದ ಅಧ್ಯಕ್ಷ ಅನಿಲ ಮಾನೆ, ಮಹಿಳಾ ಘಟಕದ ಅಧ್ಯಕ್ಷೆ ಸುಮಯಾ ಜಮಾದಾರ, ಹರೀಶ ಹಿತ್ತಲಮನಿ, ಭೀಮ್ ಆರ್ಮಿ ಅಧ್ಯಕ್ಷ ಆಕಾಶ ಚಿಟ್ಟಿಸ, ತಿಲಕ ಹಿತ್ತಲಮನಿ, ಭೀಮಾ ಮಾಳಗೆ, ಬಸವರಾಜ ವಾಲಿ, ಆಶ್ವತ್ಥ ಮಾಳಕರಿ, ಪ್ರವೀಣ ಕುರಣೆ, ವಿಶಾಲ ಮೇತ್ರೆ, ಬಸವರಾಜ ಕೋಳಿ ಸೇರಿದಂತೆ ನಾನಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
