ಕೂದಳತೆಯಲ್ಲೇ ನದಿ ತುಂಬಿ ಹರಿಯುತ್ತಿದ್ದರೂ ಆ ಭಾಗದ ಜನರಿಗೆ ಮಾತ್ರ ಕುಡಿಯಲು ಯೋಗ್ಯವಾದ ನೀರಿಲ್ಲ! ಬರೋಬ್ಬರಿ 40 ಸಾವಿರ ಜನಸಂಖ್ಯೆ ಹೊಂದಿರುವ, ತಾಲೂಕು ದರ್ಜೆಯ ಹೊಸ್ತಿಲಲ್ಲಿ ನಿಂತಿರುವ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಜನರ ಸ್ಥಿತಿ. ಕಳೆದ ಹಲವು ದಿನಗಳಿಂದ ಇಲ್ಲಿಯ ಜನ ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಶುದ್ಧ ನೀರಿನ ಘಟಕಗಳು ಇಂದು ಧೂಳು ಹಿಡಿಯುತ್ತಿವೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..

ಹೌದು… ಇಲ್ಲಿ ನದಿಯೇನೋ ತುಂಬಿ ಹರಿಯುತ್ತಿದೆ. ಆದರೆ ಕುಡಿಯಲು ಮಾತ್ರ ಹನಿ ಶುದ್ಧ ನೀರಿಲ್ಲ! ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ದುಸ್ಥಿತಿ. ಸದಲಗಾ ಪಟ್ಟಣದ ಉತ್ತರ ಭಾಗಕ್ಕೆ ಕೂದಳತೆಯ ದೂರದಲ್ಲೇ ದೂದಗಂಗಾ ನದಿ ತುಂಬಿ ಹರಿಯುತ್ತಿದೆ. ಆದರೆ, ಇಲ್ಲಿನ 40 ಸಾವಿರ ಜನಸಂಖ್ಯೆಗೆ ಮಾತ್ರ ಕಳೆದ ಒಂದು ದಶಕದಿಂದ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.
ಪಟ್ಟಣದ ಜನರ ದಣಿವು ಆರಿಸಲು 2014ರಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರೋಬ್ಬರಿ 14 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟಕಗಳಲ್ಲಿ ನೀರು ತುಂಬಲೇ ಇಲ್ಲ! ಸದ್ಯ 14 ಘಟಕಗಳ ಪೈಕಿ ಕುಂದ ಕುಂದ ಶಾಲೆ ಹಾಗೂ ಬನಶಂಕರಿ ದೇವಿ ಮಂದಿರದ ಹತ್ತಿರವಿರುವ ಕೇವಲ 2 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ 12 ಘಟಕಗಳು ಸಂಪೂರ್ಣವಾಗಿ ತುಕ್ಕು ಹಿಡಿದು ಹಾಳಾಗಿವೆ. ಪುರಸಭೆಯ ಬೇಜವಾಬ್ದಾರಿತನದಿಂದಾಗಿ ಈ ಘಟಕಗಳ ಬಾಗಿಲು, ಗಾಜುಗಳು ಮುರಿದು ಬಿದ್ದಿದ್ದು, ಒಳಗಿನ ಬೆಲೆಬಾಳುವ ಉಪಕರಣಗಳನ್ನು ಕಳ್ಳರು ಲಪಟಾಯಿಸಿದ್ದಾರೆ. ಸುಮಾರು ಅರ್ಧ ಕೋಟಿ ರೂಪಾಯಿ ವೆಚ್ಚದ ಈ ಇಡೀ ಯೋಜನೆ ಈಗ ಹಳ್ಳ ಹಿಡಿದಿದೆ.
ಒಟ್ಟಿನಲ್ಲಿ ಕೋಟಿ ಕೋಟಿ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ಹಾಳಾಗಿರುವ ಜಲ ಘಟಕಗಳನ್ನು ಸರಿಪಡಿಸಿ ಜನರಿಗೆ ಶುದ್ಧ ನೀರು ಒದಗಿಸುತ್ತಾರಾ? ಅಥವಾ ಕರವೇ ಮತ್ತು ಗ್ರಾಮಸ್ಥರ ಉಗ್ರ ಹೋರಾಟಕ್ಕೆ ದಾರಿ ಮಾಡಿಕೊಡುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ
