Uncategorized

ಕರೋಶಿಯಲ್ಲಿ ಬಸ್‌ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್‌ ಪ್ರತಿಭಟನೆ; ಪ್ರಯಾಣಿಕರ ಪರದಾಟ

Share

ಚಿಕ್ಕೋಡಿ:ತಾಲೂಕಿನ ಕರೋಶಿ ಗ್ರಾಮದಲ್ಲಿ ಬಸ್ಸುಗಳು ಸರಿಯಾಗಿ ನಿಲ್ಲುತ್ತಿಲ್ಲ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮಂಗಳವಾರ ದಿಢೀರ್ ಬಸ್ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿದಿನ ಬೆಳಗಿನ ವೇಳೆಯಲ್ಲಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಸಿಗದೆ ತೊಂದರೆಯಾಗುತ್ತಿತ್ತು. ಚಾಲಕರು ಮತ್ತು ನಿರ್ವಾಹಕರು ಕರೋಶಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ ಮುಖ ಮಾಡಿಕೊಂಡು ಹೋಗುತ್ತಿದ್ದರು. ಇದರಿಂದಾಗಿ ದಿನನಿತ್ಯ ಸರಿಯಾದ ಸಮಯಕ್ಕೆ ಕಾಲೇಜಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ನಿರತರಾಗಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮಾತನಾಡಿ ಪ್ರತಿದಿನ ನಮಗೆ ಇದೇ ಸಮಸ್ಯೆಯಾಗುತ್ತಿದೆ. ಸಮಯಕ್ಕೆ ಸರಿಯಾಗಿ ಬಸ್‌ಗಳು ನಿಲ್ಲದೆ ಇದ್ದರೆ ನಾವು ತರಗತಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹಲವು ಬಾರಿ ಮನವಿ ಮಾಡಿದರೂ ಸಾರಿಗೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.

ಆಕ್ರೋಶಗೊಂಡ ವಿದ್ಯಾರ್ಥಿಗಳು ಸುಮಾರು ೧೦ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ನಿಲ್ಲಿಸಿದರು. ಪರಿಣಾಮವಾಗಿ ಮಾರ್ಗದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಹಾಗೂ ಸಾರ್ವಜನಿಕರು ಕೆಲ ಕಾಲ ಪರದಾಡುವಂತಾಯಿತು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ಸಂಚಾರಿ ಉಪನಿರ್ವೀಕ್ಷಕರು ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಇನ್ಮುಂದೆ ಕರೋಶಿ ಗ್ರಾಮದಲ್ಲಿ ನಿಯಮಿತವಾಗಿ ಎಲ್ಲ ಬಸ್‌ಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಧಿಕಾರಿಗಳ ಭರವಸೆಗೆ ಸ್ಪಂದಿಸಿದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದು, ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Tags:

error: Content is protected !!