ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ಬಾಟಲಿ ಹಾಗೂ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಪೇಟೆಯ ರೇಣುಕಾ ಬಾರ್‌ನಲ್ಲಿ ನಡೆದಿದೆ.

ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಪರಶುರಾಮ ಕಣಕೇರಿ (40) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಪರಶುರಾಮ ತನ್ನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಲು ಬಾರ್‌ಗೆ ತೆರಳಿದ್ದ. ಇದೇ ವೇಳೆ ದಾರಿ ಬಿಡುವ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಕ್ಷಣಾರ್ಧದಲ್ಲೇ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಆರೋಪಿಗಳು ಕುಡಿತದ ಅಮಲಿನಲ್ಲಿ ಏಕಾಏಕಿ ಪರಶುರಾಮ ತಲೆಗೆ ಬಾಟಲಿಯಿಂದ ಹೊಡೆದು, ಬಳಿಕ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಪರಶುರಾಮನನ್ನು ಸ್ಥಳೀಯರು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
