Belagavi

3ನೇ ದಿನಕ್ಕೆ ಕಾಲಿಟ್ಟ ಹಿಡಕಲ್ ಸಂತ್ರಸ್ತ ರೈತರ ಅಹೋರಾತ್ರಿ ಧರಣಿ: ದನದ ಕೊಟ್ಟಿಗೆಯಾದ ನೀರಾವರಿ ಇಲಾಖೆ ಕಚೇರಿ!

Share

ಬೆಳಗಾವಿಯಲ್ಲಿ ಹಿಡಕಲ್ ಜಲಾಶಯದ ಸಂತ್ರಸ್ತ ರೈತರ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ಭೂಮಿ ಕಳೆದುಕೊಂಡು 10-12 ವರ್ಷ ಕಳೆದರೂ ಪರಿಹಾರ ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿರುವ ರೈತರು, ನೀರಾವರಿ ಇಲಾಖೆಯ ಉತ್ತರ ವಲಯ ಮುಖ್ಯ ಅಭಿಯಂತರ ಕಚೇರಿ ಆವರಣವನ್ನೇ ದನದ ಕೊಟ್ಟಿಗೆಯನ್ನಾಗಿ ಮಾರ್ಪಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಬೆಳಗಾವಿಯಲ್ಲಿ ಹಿಡಕಲ್ ಜಲಾಶಯದ ಸಂತ್ರಸ್ತ ರೈತರ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ನೀರಾವರಿ ಇಲಾಖೆಯ ಉತ್ತರ ವಲಯ ಮುಖ್ಯ ಅಭಿಯಂತರ ಕಚೇರಿ ಆವರಣವನ್ನೇ ದನದ ಕೊಟ್ಟಿಗೆಯನ್ನಾಗಿ ಮಾರ್ಪಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ, ಜಾರಕಿಹೊಳಿ, ಬೀರನಹಳ್ಳಿ, ಸುತಗಟ್ಟಿ, ಗುಡಗನಟ್ಟಿ ಸೇರಿದಂತೆ ಸುತ್ತಮುತ್ತಲಿನ ಎಂಟು ಹಳ್ಳಿಗಳ ರೈತರು ತಮಗಾಗಿರುವ ಅನ್ಯಾಯದ ವಿರುದ್ಧ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಒಟ್ಟು 394 ಎಕರೆ 26 ಗುಂಟೆ ಜಮೀನಿಗೆ ಇದುವರೆಗೆ ಯಾವುದೇ ಪರಿಹಾರ ಧನ ಸಿಕ್ಕಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ನ್ಯಾಯಸಮ್ಮತವಾಗಿ ಸಿಗಬೇಕಾದ ಪರಿಹಾರದ ಫೈಲ್ ಮೂವ್‌ಮೆಂಟ್ ಮಾಡಲು ಭ್ರಷ್ಟ ಅಧಿಕಾರಿಗಳು ಬರೋಬ್ಬರಿ 2 ರಿಂದ 5 ಕೋಟಿ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ರೈತ ಮುಖಂಡರು ನೇರ ಆರೋಪ ಮಾಡಿದ್ದಾರೆ. ಪ್ರತಿಭಟನಾ ನಿರತ ರೈತರು ಅಧಿಕಾರಿಗಳ ದಾರಿ ತಪ್ಪಿಸುವ ತಂತ್ರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಅಧಿಕಾರಿಗಳು ಅಸಲಿ ದಾಖಲೆಗಳನ್ನು ಬದಗಿಟ್ಟು, ಸ್ವಂತವಾಗಿ 150 ಎಕರೆ ಕಡಿತಗೊಳಿಸಿ ಖೊಟ್ಟಿ ವರದಿ ಸಿದ್ಧಪಡಿಸುತ್ತಿದ್ದಾರೆ. ಈಗಾಗಲೇ ಚೆಕ್ ಮೂಲಕ ಹಣ ನೀಡಲಾಗಿದೆ ಎಂದು ಸುಳ್ಳು ಹೇಳುತ್ತಿರುವ ಅಧಿಕಾರಿಗಳು, ಯಾರ ಖಾತೆಗೆ ಹಣ ಜಮಾ ಮಾಡಲಾಗಿದೆ ಎಂಬ ಅಸಲಿ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಅಧಿಕಾರಿಗಳ ಈ ತಪ್ಪು ಮಾಹಿತಿಯಿಂದಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ ಎಂದು ರೈತರು ದೂರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹತ್ತಾರು ಬಾರಿ ಸೂಚನೆ ನೀಡಿದ್ದರೂ ಕ್ಯಾರೆ ಎನ್ನದ ಇರಿಗೇಷನ್ ನಿಗಮದ ಎಂಡಿ ರಾಜೇಶ್ ಅಮ್ಮಿನಭಾವಿ ಹಾಗೂ ಇಂಜಿನಿಯರ್ ರಾಠೋಡ್‌ರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ರೈತ ಮುಖಂಡ ಬಾಳೇಶ್ ಮಾವನೂರ ಆಗ್ರಹಿಸಿದ್ದಾರೆ. ಪೊಲೀಸರನ್ನು ಬಳಸಿ ಪ್ರತಿಭಟನೆ ಹತ್ತಿಕ್ಕಲು ನೋಡಿದರೆ ನಾವು ಜಗ್ಗುವುದಿಲ್ಲ. ಒಂದು ವೇಳೆ ಈ ಹೋರಾಟದ ಮಧ್ಯೆ ಯಾರೇ ಪ್ರಾಣ ಕಳೆದುಕೊಂಡರೂ, ಆ ಶವವನ್ನು ಡಿಸಿ ಕಚೇರಿ ಅಥವಾ ಸಿಎಂ ಕಚೇರಿ ಮುಂದಿಟ್ಟು ಹೋರಾಟ ಮಾಡುವುದಾಗಿ ರೈತರು ಸರ್ಕಾರಕ್ಕೆ ಕಡಕ್ ಎಚ್ಚರಿಕೆ ನೀಡಿದ್ದಾರೆ.

“ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿ ಹೆದರಿಸುವ ಕೆಲಸ ನಡೆದರೆ ನಾವು ಜಗ್ಗುವುದಿಲ್ಲ” ಎಂದ ಪ್ರತಿಭಟನಾ ನಿರತರು, ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲಿದ್ದು, ಹೋರಾಟ ಮತ್ತಷ್ಟು ಉಗ್ರ ರೂಪ ಪಡೆಯಲಿದೆ ಎಂದು ಎಚ್ಚರಿಸಿದರು. “ಒಂದು ವೇಳೆ ಈ ಹೋರಾಟದ ಮಧ್ಯೆ ಯಾವುದೇ ರೈತರು ಪ್ರಾಣ ಕಳೆದುಕೊಂಡರೆ, ಆ ಮೃತದೇಹವನ್ನು ಜಿಲ್ಲಾಧಿಕಾರಿ ಕಚೇರಿ ಅಥವಾ ಸಿಎಂ ಕಚೇರಿ ಮುಂದೆಯೇ ಇಟ್ಟು ಪ್ರತಿಭಟನೆ ನಡೆಸುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿ ಲಿಖಿತ ಭರವಸೆ ನೀಡುವವರೆಗೂ ಶವವನ್ನೂ ಸಹ ಅಲ್ಲಿಂದ ಎಬ್ಬಿಸುವುದಿಲ್ಲ” ಎಂದು ಆಡಳಿತ ವ್ಯವಸ್ಥೆಗೆ ಕಡಕ್ ಎಚ್ಚರಿಕೆ ನೀಡಿದರು. ರೈತರ ಭೂಮಿಯನ್ನು ಕಸಿದುಕೊಂಡು ಕಚೇರಿಗಳನ್ನು ಕಟ್ಟಿಕೊಂಡಿರುವ ಅಧಿಕಾರಿಗಳು ಈಗ ರೈತರಿಗೇ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Tags:

error: Content is protected !!