ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಸಮೀಪ ಈ ಘಟನೆ ನಡೆದಿದ್ದು, ಮೃತನನ್ನು ಫಾಸ್ಕಲ್ ಹೃದಯ್ ರಾಜ್ ಮುತ್ತುಸ್ವಾಮಿ (31) ಎಂದು ಗುರುತಿಸಲಾಗಿದೆ. ಆತ ಗೋಕಾಕ ತಾಲೂಕಿನ ಮಾಣಿಕವಾಡಿ ಗ್ರಾಮದ ನಿವಾಸಿಯಾಗಿದ್ದಾನೆ ಎಂದರು.
ಮೃತ ಫಾಸ್ಕಲ್ ತನ್ನ ಸ್ನೇಹಿತರೊಂದಿಗೆ ಹಿಡಕಲ್ ಜಲಾಶಯದ ಬಳಿ ತೆರಳಿದ್ದ ವೇಳೆ, ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಸುಮಾರು 11 ಜನರ ತಂಡ ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಗಂಗಪ್ಪ ನಾಯಿಕ್, ರಾಹುಲ್, ನಾಗೇಶ್ ನಾಯಿಕ್, ಪ್ರಜ್ವಲ್ ಸೇರಿದಂತೆ ಇತರರ ವಿರುದ್ಧ ಆರೋಪ ಕೇಳಿಬಂದಿದ್ದು, ಇದುವರೆಗೆ ಏಳು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯ ಹಿಂದಿನ ನಿಖರ ಕಾರಣ ಹಾಗೂ ಸಂಚಿನ ಕುರಿತು ತನಿಖೆ ಮುಂದುವರಿದಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದರು.
