ಕರ್ನಾಟಕ, ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ನಿಂಗ್ಯಾನಟ್ಟಿ, ಕುರಿಹಾಳ ಹಾಗೂ ಇದ್ದಲಹೊಂಡ ಗ್ರಾಮಗಳ ಸಮೀಪ ಕಾರ್ಯನಿರ್ವಹಿಸುತ್ತಿರುವ ಕ್ಯಾಲಿಟಿ ಎನಿಮಲ್ ಫೀಡ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಿಂದ ಹರಡುತ್ತಿರುವ ದುರ್ವಾಸನೆ ಹಾಗೂ ಕಲುಷಿತ ತ್ಯಾಜ್ಯ ನೀರಿನಿಂದ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಕರುನಾಡ ರಕ್ಷಣಾ ವೇದಿಕೆ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಕಾರ್ಖಾನೆಯಿಂದ ನಿರಂತರವಾಗಿ ಹರಡುತ್ತಿರುವ ದುರ್ವಾಸನೆಯಿಂದ ಶಾಲಾ ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ದುರ್ವಾಸನೆಯ ಪರಿಣಾಮ ಕೆಲ ಮಕ್ಕಳು ಶಾಲೆಗೆ ಹೋಗಲು ಸಹ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದರ ಜೊತೆಗೆ, ಕಾರ್ಖಾನೆಯಿಂದ ಹೊರಬರುವ ತ್ಯಾಜ್ಯ ಮತ್ತು ಕಲುಷಿತ ನೀರನ್ನು ಗ್ರಾಮದ ಸಮೀಪದ ನದಿಗೆ ಬಿಡಲಾಗುತ್ತಿದೆ. ಇದರಿಂದ ನೀರು ಮಾಲಿನ್ಯಗೊಂಡಿದ್ದು, ಆ ನೀರನ್ನು ಕುಡಿದ ಸುಮಾರು 100ರಿಂದ 110 ಜಾನುವಾರುಗಳು ಮೃತಪಟ್ಟಿವೆ. ಇನ್ನೂ ಹಲವು ಜಾನುವಾರುಗಳು ಅಸ್ವಸ್ಥಗೊಂಡಿವೆ ಎಂದು ಮನವಿಯಲ್ಲಿ ದೂರಿದ್ದಾರೆ.
ಕಾರ್ಖಾನೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕ ಆರೋಗ್ಯದ ಸಮಸ್ಯೆಯನ್ನು ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಶೀಲನೆ ನಡೆಸಬೇಕು. ದುರ್ವಾಸನೆ ಹಾಗೂ ಕಲುಷಿತ ತ್ಯಾಜ್ಯ ನೀರನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರುನಾಡ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
