Khanapur

ತಾಪಮಾನ ಏರಿಕೆಗೆ ಬ್ರೇಕ್ ಹಾಕಲು ವೃಕ್ಷಾರೋಪಣ ಇಂದಿನ ಅಗತ್ಯ: ಕಸಬಾ ನಂದಗಡದಲ್ಲಿ ಶಾಸಕ ವಿಠ್ಠಲ ಹಲಗೇಕರ ಪ್ರತಿಪಾದನೆ!

Share

ಜಾಗತಿಕ ತಾಪಮಾನದ ಸವಾಲನ್ನು ಎದುರಿಸಲು ಖಾನಾಪುರ ತಾಲೂಕಿನ ಕಸಬಾ ನಂದಗಡದಲ್ಲಿ ಮಹತ್ವದ ಪರಿಸರ ಜಾಗೃತಿ ಕಾರ್ಯಕ್ರಮ ನಡೆದಿದೆ. ಜಗದ್ಗುರು ನರೇಂದ್ರಾಚಾರ್ಯಜೀ ಮಹಾರಾಜರ ಪ್ರೇರಣೆಯೊಂದಿಗೆ ಹಮ್ಮಿಕೊಳ್ಳಲಾಗಿದ್ದ “ಪ್ರತಿಯೊಬ್ಬ ಭಕ್ತನಿಂದ ಒಂದು ವೃಕ್ಷ” ಮಹಾ ಅಭಿಯಾನಕ್ಕೆ ಸ್ಥಳೀಯ ಶಾಸಕರು ಚಾಲನೆ ನೀಡಿದರು.

ಜಗದ್ಗುರು ಶ್ರೀಮದ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜ್ (ನಾಣೀಜಧಾಮ್) ಅವರ ದಿವ್ಯ ಪ್ರೇರಣೆಯಿಂದ ತಾಲೂಕಿನ ಕಸಬಾ ನಂದಗಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವೃಕ್ಷಾರೋಪಣ ಮಹಾಅಭಿಯಾನ ೨೦೨೬’ ಕ್ಕೆ ಶಾಸಕ ವಿಠ್ಠಲ ಹಲಗೇಕರ ಗಿಡ ನೆಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, “ಪ್ರತಿಯೊಬ್ಬ ಭಕ್ತನಿಂದ ಒಂದು ವೃಕ್ಷ” ಎಂಬ ಸಂಕಲ್ಪದ ಅಡಿಯಲ್ಲಿ ಗಿಡ ನೆಡುವ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದರಲ್ಲದೆ, ಜಾಗತಿಕ ತಾಪಮಾನ ಏರಿಕೆಯಂತಹ ದೊಡ್ಡ ಸಂಕಟವನ್ನು ಎದುರಿಸಲು ಮತ್ತು ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಲು ಸಂಪ್ರದಾಯದ ವತಿಯಿಂದ ಹಮ್ಮಿಕೊಂಡಿರುವ ಈ ಉಪಕ್ರಮವು ಅತ್ಯಂತ ಪ್ರಶಂಸನೀಯ ಹಾಗೂ ಇಂದಿನ ಕಾಲದ ಅಗತ್ಯವಾಗಿದೆ ಎಂದು ಶ್ಲಾಘಿಸಿದರು. ಹಿರಿಯ ಶಿಕ್ಷಕ ಬಾಲಕೃಷ್ಣ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರಮುಖರಾದ ವಿಲಾಸ ಪಾಟೀಲ, ಗಜಾನನ ಪಾಟೀಲ, ಗೋಪಾಲ ಪಾಟೀಲ, ಪ್ರವೀಣ್ ಪಾಟೀಲ ಸೇರಿದಂತೆ ಜಗದ್ಗುರು ನರೇಂದ್ರ ಸ್ವಾಮೀಜಿಯವರ ಸ್ಥಳೀಯ ಭಕ್ತರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆಯ ಸಂಕಲ್ಪ ತೊಟ್ಟರು.

*- ಅಲ್ತಾಫ್ ಎಂ ಬಸರೀಕಟ್ಟಿ, ಇನ್ ನ್ಯೂಸ್ ಖಾನಾಪೂರ*

Tags:

error: Content is protected !!