ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಆಧುನಿಕ ವಿದ್ಯುನ್ಮಾನ ಉಪಕರಣ ಹಾಗೂ ತಂತ್ರಜ್ಞಾನಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಸಾಧನೆಯತ್ತ ಹೆಜ್ಜೆ ಇಡಬೇಕು ಎಂದು ಯಮಕನಮರಡಿ ಸಿ.ಇ.ಎಸ್. ಪದವಿ ಪೂರ್ವ ಮಹಾವಿದ್ಯಾಲಯದ ಹಿರಿಯ ವಾಣಿಜ್ಯ ಉಪನ್ಯಾಸಕ ಶ್ರೀ ಬಸವರಾಜ ಮಾನಗಾವಿ ಹೇಳಿದರು.

ಅವರು ಚಿಕ್ಕೋಡಿಯ ಆರ್.ಡಿ. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮುಂದುವರಿದು ಅವರು, ಗುರು-ಶಿಷ್ಯರ ಸಂಬಂಧದ ಮಹತ್ವ, ತಂದೆ-ತಾಯಿಯರ ಬಗ್ಗೆ ಗೌರವ ಹಾಗೂ ಉತ್ತಮ ಸಂಸ್ಕಾರಗಳ ಅಗತ್ಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕಾಲೇಜಿನಲ್ಲಿ ಲಭ್ಯವಿರುವ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ್ದ ಆರ್.ಡಿ. ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಸುಬೇದಾರ ಶ್ರೀ ಚಿದಾನಂದ ಕಮತೆ ಮಾತನಾಡಿ, ಜೀವನದಲ್ಲಿ ಶಿಸ್ತು, ಪರಿಶ್ರಮ ಹಾಗೂ ನಿರಂತರ ಪ್ರಯತ್ನದಿಂದ ಮಾತ್ರ ಗುರಿ ಸಾಧನೆ ಸಾಧ್ಯ. ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಇಂದಿನಿಂದಲೇ ದೃಢ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಉಪನ್ಯಾಸಕ ಪ್ರಕಾಶ ಮನಗೂಳಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಹಾಗೂ ವಿವಿಧ ಚಟುವಟಿಕೆಗಳ ರೂಪರೇಷೆಗಳನ್ನು ವಿವರಿಸಿ, ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಯು. ಎಸ್. ಶಿಂದೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಶಿಕ್ಷಣದ ಜೊತೆಗೆ ಶಿಸ್ತು, ಸಂಯಮ, ಉತ್ತಮ ನಡವಳಿಕೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು. ಈ ಮಹಾವಿದ್ಯಾಲಯದಲ್ಲಿ ಶಿಕ್ಷಣದೊಂದಿಗೆ ಕಲೆ, ಕ್ರೀಡೆ, ಮುಂತಾದವುಗಳಿಂದ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯದ ಬುನಾದಿಯತ್ತ ಸಾಗಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಆರ್ ಎ ಮರಪ್ಪಗೋಳ, ಎನ್ ಎಸ್ ಎಸ್ ವಿಭಾಗದ ಮುಖ್ಯಸ್ಥ ಎಸ್ ಎಸ್ ಪಾಟೀಲ, ಕ್ರೀಡಾ ವಿಭಾಗದ ಮುಖ್ಯಸ್ಥ ಅಯ್ ಬಿ ಘಸ್ತಿ, ಉಪನ್ಯಾಸಕ ಹಾಗೂ ಸಿಬ್ಬಂಧಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ದತ್ತರಾಜ ಕುಲಕರ್ಣಿ ಸ್ವಾಗತಿಸಿದರು
ಕುಮಾರಿ ಗುರವ ಹಾಗೂ ಕುಮಾರಿ ಮಾನೆ ನಿರೂಪಿಸಿದರು.
