ಬೆಳಗಾವಿಯ ಗಣೇಶಪುರ ಹಿಡಲಗಾದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಷ್ಠಿತ ಖೋ-ಖೋ ಪಂದ್ಯಾವಳಿಯಲ್ಲಿ ಶಿಂದೋಳಿಯ ದೇವೇಂದ್ರ ಜಿನಗೌಡ ಶಾಲೆ ಐತಿಹಾಸಿಕ ಸಾಧನೆ ಮಾಡಿದೆ. ಭಾಗವಹಿಸಿದ್ದ ನಾಲ್ಕೂ ವಿಭಾಗಗಳಲ್ಲಿಯೂ ಎದುರಾಳಿಗಳನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಕ್ರೀಡಾ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಸಂತ ಮೀರಾ ಅನಗೋಳ ಸಂಸ್ಥೆಯು ಗಣೇಶಪುರ ಹಿಡಲಗಾದ ಸಂತ ಮೀರಾ ಇಂಗ್ಲಿಷ್ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ದೇವೇಂದ್ರ ಜಿನಗೌಡ ಸ್ಕೂಲ್ ಶಿಂದೋಳಿ ತಂಡವು ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗದ ಬಾಲಕ ಮತ್ತು ಬಾಲಕಿಯರ ನಾಲ್ಕೂ ಪಂದ್ಯಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಂತಿಮ ಹಣಾಹಣಿಯಲ್ಲಿ ದೇವೇಂದ್ರ ಜಿನಗೌಡ ಶಾಲೆ ಸಂತ ಮೀರಾ ಗಣೇಶಪುರವನ್ನು 7 ಗಡಿಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿತು. ಪ್ರಾಥಮಿಕ ಬಾಲಕಿಯರ ಫೈನಲ್‌ನಲ್ಲಿ ದೇವೇಂದ್ರ ಜಿನಗೌಡ ಶಾಲೆ ಖಾನಾಪುರದ ಶಾಂತಿನಿಕೇತನ ಶಾಲೆಯನ್ನು 11 ಅಂಕಗಳಿಂದ ಮಣಿಸಿತು. ಇತ್ತ ಮಾಧ್ಯಮಿಕ ಬಾಲಕರ ವಿಭಾಗದ ಉಪಾಂತ್ಯದಲ್ಲಿ ಸಂತ ಮೀರಾ ಗಣೇಶಪುರ ತಂಡ ಸಂತ ಮೀರಾ ಅನಗೋಳವನ್ನು 7 ಅಂಕಗಳಿಂದ ಹಾಗೂ ದೇವೇಂದ್ರ ಜಿನಗೌಡ ಶಾಲೆ ಶಾಂತಿನಿಕೇತನ ಪಬ್ಲಿಕ್ ಶಾಲೆಯನ್ನು 7 ಅಂಕಗಳಿಂದ ಸೋಲಿಸಿ ಫೈನಲ್ ತಲುಪಿದ್ದವು; ಅಂತಿಮ ಪಂದ್ಯದಲ್ಲಿ ದೇವೇಂದ್ರ ಜಿನಗೌಡ ಶಾಲೆ ಸಂತ ಮೀರಾ ಗಣೇಶಪುರವನ್ನು 7 ಅಂಕಗಳಿಂದ ಪರಾಭವಗೊಳಿಸಿತು. ಮಾಧ್ಯಮಿಕ ಬಾಲಕಿಯರ ಫೈನಲ್‌ನಲ್ಲೂ ದೇವೇಂದ್ರ ಜಿನಗೌಡ ಶಾಲೆ ಖಾನಾಪುರದ ಶಾಂತಿನಿಕೇತನ ಪಬ್ಲಿಕ್ ಶಾಲೆಯನ್ನು 11 ಅಂಕಗಳ ಅಂತರದಿಂದ ಸೋಲಿಸಿ ವಿಜಯ ಪತಾಕೆ ಹಾರಿಸಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯಾಧ್ಯಾಪಕಿ ಆರತಿ ಪಾಟೀಲ, ಚಂದ್ರಕಾಂತ್ ಪಾಟೀಲ, ಅನುರಾಧಾ ಪುರಿ, ಕ್ರೀಡಾ ಶಿಕ್ಷಕರಾದ ಶ್ರೀಕಾಂತ್ ಕಾಂಬಳೆ, ಶುಭಾಂಗಿ ಕಾಕತ್ಕರ್, ಶಿವಕುಮಾರ್ ಸುತಾರ್, ಗಂಗಾ ಗಾನಿಕೊಪ್ಪ, ಸಾಗರ್ ಕೋಲೇಕರ್ ಅವರ ಹಸ್ತದಿಂದ ವಿಜೇತರಿಗೆ ಚಷಕ ವಿತರಿಸಲಾಯಿತು. ಈ ವೇಳೆ ಸ್ವಾತಿ ಸಾವಂತ್, ಶಿವಕುಮಾರ್, ಪೂರ್ಣಿಮಾ ಬಾಳೇಕಾಯಿ, ಸುಜಿತ್ ನೇರುಲ್ಕರ್, ಸೂರಜ್ ದೇಸೂರ್ಕರ್ ಉಪಸ್ಥಿತರಿದ್ದರು. ಚಂದ್ರಕಾಂತ್ ಪಾಟೀಲ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಕಾಂತ್ ಕಾಂಬಳೆ ವಂದಿಸಿದರು
