Kagawad

ಕಾಗವಾಡ: ಬಸವೇಶ್ವರ ಹಾಗೂ ಐನಾಪುರ ಏತ ನೀರಾವರಿ ಯೋಜನೆಗಳಿಗೆ ಶಾಸಕ ರಾಜು ಕಾಗೆ ಚಾಲನೆ

Share

ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ರೈತರ ಬಹುದಿನಗಳ ಕನಸಾಗಿದ್ದ ಶ್ರೀ ಬಸವೇಶ್ವರ ಏತ ನೀರಾವರಿ ಹಾಗೂ ಐನಾಪುರ ಏತ ನೀರಾವರಿ ಯೋಜನೆಗಳಿಗೆ ಶಾಸಕ ರಾಜು ಕಾಗೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಈ ವರ್ಷ ಮುಂಗಾರು ಮಳೆ ತಡವಾಗಿದ್ದರಿಂದ ಕೃಷ್ಣಾ ನದಿಗೆ ತಡವಾಗಿ ನೀರು ಬಂದಿದ್ದು, ಇದೀಗ ಯೋಜನೆಗಳಿಗೆ ಚಾಲನೆ ದೊರೆತಂತಾಗಿದೆ.

ಶುಕ್ರವಾರ ಬೆಳಗ್ಗೆ ಐನಾಪುರದ ಕೃಷ್ಣಾ ನದಿ ತೀರದಲ್ಲಿರುವ ಐನಾಪುರ ಏತ ನೀರಾವರಿ ಯೋಜನೆಗೆ ಮಂಗಸೂಳಿ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ರವೀಂದ್ರ ಪೂಜಾರಿ ಅವರ ಹಸ್ತದಿಂದ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಇನ್ನು ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಗೆ ಶಾಸಕ ರಾಜು ಕಾಗೆ ಅವರು ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ರೈತರನ್ನುದ್ದೇಶಿಸಿ ಮಾತನಾಡಿದ ಶಾಸಕರು, ಈ ವರ್ಷ ಒಂದು ತಿಂಗಳ ಕಾಲ ಕೃಷ್ಣಾ ನದಿಗೆ ನೀರು ಬಾರದ ಹಿನ್ನೆಲೆಯಲ್ಲಿ ಯೋಜನೆ ತಡವಾಗಿ ಆರಂಭಗೊಂಡಿದೆ. ರೈತರು ಯಾವುದೇ ಭಿನ್ನಾಭಿಪ್ರಾಯ ಮಾಡಿಕೊಳ್ಳದೆ ತಾಳ್ಮೆಯಿಂದ ನೀರಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಇನ್ನು ಸುಮಾರು 300 ಕೋಟಿ ರೂಪಾಯಿಗಳ ಅವಶ್ಯಕತೆಯಿದೆ. ಈ ಕುರಿತು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅನುದಾನ ನೀಡುವಂತೆ ಮನವಿ ಮಾಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದರು. ಅನಂತಪುರ ಹಾಗೂ ತೆಲಸಂಗ ಹೋಬಳಿ ವ್ಯಾಪ್ತಿಯ 30 ಗ್ರಾಮಗಳಿಗೆ ಬಸವೇಶ್ವರ ಯೋಜನೆ ಪೂರ್ಣಗೊಳಿಸಿ ಸಮರ್ಪಕವಾಗಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.

ಇದೇ ವೇಳೆ ತಮಗೆ ಸಚಿವ ಸ್ಥಾನ ಸಿಗುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜು ಕಾಗೆ, ಬೆಳಗಾವಿ ಜಿಲ್ಲೆ ದೊಡ್ಡದಾಗಿದ್ದು ಈಗಾಗಲೇ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಲಕ್ಷ್ಮಣ್ ಸವದಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಸಚಿವ ಸ್ಥಾನ ನೀಡಬೇಕೆಂಬುದು ನನ್ನ ಅಭಿಪ್ರಾಯ. ಸದ್ಯ ನನ್ನ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ನನಗೆ ಸಚಿವ ಸ್ಥಾನ ಬೇಡ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕವಲುಗುಡ್ಡ ಸಿದ್ದರಾಮ ಮಠದ ಅಮರೇಶ್ವರ ಮಹಾರಾಜರು ಮಾತನಾಡಿ, ಶಾಸಕ ರಾಜು ಕಾಗೆ ಅವರು ಅನಾರೋಗ್ಯದ ನಡುವೆಯೂ ವಿಶೇಷ ಆಸಕ್ತಿ ವಹಿಸಿ ಈ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ 11 ಕೆರೆಗಳನ್ನು ತುಂಬಿಸುವ ಯೋಜನೆಗೂ ಅವರು ಶ್ರಮಿಸಬೇಕು ಎಂದರು.

ಬಳಿಕ ನೀರಾವರಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತ ಪ್ರವೀಣ್ ಹುಣಸಿಕಟ್ಟಿ ಮಾತನಾಡಿ, ಈ ಯೋಜನೆಗಳ ಮೂಲಕ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಕೆಯಾಗಲಿದೆ. ರೈತರು ನೀರಿಗಾಗಿ ಗೊಂದಲ ಮಾಡಿಕೊಳ್ಳದೆ, ಏನಾದರೂ ಸಮಸ್ಯೆ ಎದುರಾದರೆ ತಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಭಿಯಂತರರಾದ ಪ್ರಶಾಂತ್ ಪೋತದಾರ್, ಬಸವರಾಜ್ ಗಲಗಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿನಾಯಕ ಬಾಗಡಿ, ಚಂದ್ರಕಾಂತ್ ಇಮ್ಮಡಿ, ಗಾಯತ್ರಿ ಕಂಪನಿಯ ವ್ಯವಸ್ಥಾಪಕ ಕೆ. ನಾಗೇಶ್ ಸೇರಿದಂತೆ ಮಂಗಸೂಳಿ, ಲೋಕೂರ, ಮದಭಾವಿ, ಕೆಂಪುವಾಡ ಸೇರಿದಂತೆ ಹಲವು ಗ್ರಾಮಗಳ ನೂರಾರು ರೈತರು ಉಪಸ್ಥಿತರಿದ್ದರು.

ಸುಕುಮಾರ್ ಬನ್ನೂರೆ, ಇನ್ ನ್ಯೂಸ್, ಕಾಗವಾಡ.

Tags:

error: Content is protected !!