ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ವಿನೂತನ ಹೆಜ್ಜೆ ಇಟ್ಟಿದೆ. ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನದ ಮೂಲಕ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಲು ಶಾಸಕ ಲಕ್ಷ್ಮಣ ಸವದಿ ಅವರು ತಮ್ಮ ಶಾಸಕರ ನಿಧಿಯಿಂದ ಬೃಹತ್ ಮೊತ್ತವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಅಥಣಿ ಪಟ್ಟಣದ ಪ್ರಮುಖ ವೃತ್ತಗಳಾದ ಡಾ. ಅಂಬೇಡ್ಕರ್ ಸರ್ಕಲ್, ಸ್ವಾಮಿ ವಿವೇಕಾನಂದ ಸರ್ಕಲ್, ಶಿವಯೋಗಿ ಸರ್ಕಲ್ ಹಾಗೂ ಬಸವೇಶ್ವರ ಸರ್ಕಲ್ಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶಾಸಕ ಲಕ್ಷ್ಮಣ ಸವದಿ ಮುಂದಾಗಿದ್ದಾರೆ. ಪೊಲೀಸ್ ಇಲಾಖೆಯ ವರದಿಯ ಆಧಾರದ ಮೇಲೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ಸಿಗ್ನಲ್ ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ತಮ್ಮ ಶಾಸಕರ ನಿಧಿಯಿಂದ ಸುಮಾರು ₹22 ಲಕ್ಷ ರೂಪಾಯಿಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಇನ್ನು ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಈ ಅತ್ಯಾಧುನಿಕ ವ್ಯವಸ್ಥೆ ಜಾರಿಗೆ ಬರಲಿದ್ದು, ಕಾನ್ಸ್ಟೆಬಲ್ಗಳ ನೆರವಿಲ್ಲದೆಯೇ ತಾನಾಗಿಯೇ ಸಂಚಾರ ನಿಯಂತ್ರಿಸುವ ಹೊಸ ತಂತ್ರಜ್ಞಾನ ಇದಾಗಿದೆ ಎಂದು ಅವರು ವಿವರಿಸಿದರು.
ಇನ್ನು ಇದೇ ವೇಳೆ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಕಡಕ್ ಎಚ್ಚರಿಕೆ ನೀಡಿದ ಶಾಸಕರು, ಹೊಸ ತಂತ್ರಜ್ಞಾನದ ಮೂಲಕ ಹೆಲ್ಮೆಟ್ ರಹಿತ ಸವಾರಿಯನ್ನು ಸ್ವಯಂಚಾಲಿತವಾಗಿ ಗುರುತಿಸಿ ದಂಡ ವಿಧಿಸುವ ವ್ಯವಸ್ಥೆ ಅಥಣಿಯಲ್ಲೂ ಜಾರಿಯಾಗುತ್ತಿದೆ ಎಂದರು. ಅನಗತ್ಯವಾಗಿ ದಂಡ ಪಾವತಿಸುವುದನ್ನು ತಪ್ಪಿಸಲು ಮತ್ತು ಮುಖ್ಯವಾಗಿ ತಮ್ಮ ಜೀವ ರಕ್ಷಣೆಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಪ್ರತಿಯೊಬ್ಬರಿಗೂ ತಮ್ಮ ಕುಟುಂಬದ ಜವಾಬ್ದಾರಿಯ ಅರಿವಿರಬೇಕು ಎಂದು ಕಿವಿಮಾತು ಹೇಳಿದರು. ಪ್ರಮುಖ ವೃತ್ತಗಳಲ್ಲಿ ಪೊಲೀಸರು ಇರಲಿ ಅಥವಾ ಇಲ್ಲದಿರಲಿ, ಸಿಸಿ ಕ್ಯಾಮೆರಾಗಳು ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲಿವೆ. ಹೀಗಾಗಿ ಸಾರ್ವಜನಿಕರು ತಮ್ಮ ಸ್ವಂತ ರಕ್ಷಣೆಗಾಗಿ ಪೊಲೀಸ್ ಇಲಾಖೆಯ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸವದಿ ಮನವಿ ಮಾಡಿದರು.
