ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಮತ್ತು ಸರ್ಕಾರದ ಸೌಲಭ್ಯಗಳು ಸಿಗುವಂತಾಗಲು ‘ಎಸ್ಐಆರ್’ ನೋಂದಣಿ ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆದಿದೆ.


ಶಾಲೆಯ ನೋಡಲ್ ಅಧಿಕಾರಿ ಸುಮಿತ್ರಾ ಕರವಿನಕೊಪ್ಪ ಅವರ ನೇತೃತ್ವದಲ್ಲಿ ಸಾಕ್ಷರತಾ ಕ್ಲಬ್ನ ವಿದ್ಯಾರ್ಥಿಗಳು ಕಾಕತಿ ಗ್ರಾಮದ ಪ್ರಮುಖ ಬೀದಿಗಳು, ಜನಸಂದಣಿ ಪ್ರದೇಶ ಹಾಗೂ ಅಂಗಡಿ ಮುಗ್ಗಟ್ಟುಗಳಲ್ಲಿ ವಿಶೇಷ ಘೋಷವಾಕ್ಯಗಳ ಮೂಲಕ ಸಂಚರಿಸಿದರು. ಬೀದಿ ಬದಿಯ ಕಾಯಿಪಲ್ಲೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರನ್ನು ಖುದ್ದಾಗಿ ಭೇಟಿಯಾದ ತಂಡ, ಎಸ್ಐಆರ್ – 2026ರ ಪ್ರಾಮುಖ್ಯತೆಯನ್ನು ವಿವರಿಸಿತು. ಯಾವುದೇ ಕಾರಣಕ್ಕೂ ಯಾರೂ ಈ ಪ್ರಕ್ರಿಯೆಯಿಂದ ಹೊರಗುಳಿಯದೆ ತಕ್ಷಣವೇ ಹೆಸರು ನೋಂದಾಯಿಸಿಕೊಳ್ಳಬೇಕು ಹಾಗೂ ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಬೇಕು ಎಂದು ಶಿಕ್ಷಕಿ ಸುಮಿತ್ರಾ ತಿಳುವಳಿಕೆ ನೀಡಿದರು.
ಶಾಲಾ ಮಕ್ಕಳ ಈ ಸಾಮಾಜಿಕ ಕಳಕಳಿಗೆ ಗ್ರಾಮಸ್ಥರು ಅತ್ಯಂತ ಧನಾತ್ಮಕವಾಗಿ ಸ್ಪಂದಿಸಿದರು. ಈಗಾಗಲೇ ತಾವು ಅಗತ್ಯ ದಾಖಲೆಗಳನ್ನು ನೀಡಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಮಾಹಿತಿ ಇಲ್ಲದ ಇತರರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಅಶೋಕ ಖೋತ, ಶಿಕ್ಷಕರಾದ ಗಿರೀಶ ಜಗಜಂಪಿ, ಲಲಿತಾ ಮಹಾಜನ ಶೆಟ್ಟಿ, ಗೀತಾ ಕಾನಟ್ಟಿ, ಮಹೇಶ್ ಅಕ್ಕಿ, ಶಿವಾನಂದ ತಲ್ಲೂರ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
