Kagawad

ಏಳು ವರ್ಷಗಳಾದರೂ ಮುಗಿಯದ ಕೃಷ್ಣಾ ನದಿಯ ಮೂರು ಸೇತುವೆಗಳ ಕಾಮಗಾರಿ: ಕಾಗವಾಡ ಭಾಗದ ಜನರ ಆಕ್ರೋಶ

Share

ಕೃಷ್ಣಾ ನದಿಗೆ ಪ್ರವಾಹ ಬಂದಾಗ ಸಾರ್ವಜನಿಕರ ಸುರಕ್ಷಿತ ಸಂಚಾರ ಹಾಗೂ ವರ್ಷಪೂರ್ತಿ ಸುಗಮ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಆರಂಭಿಸಲಾದ ಮೂರು ಸೇತುವೆಗಳ ಕಾಮಗಾರಿ ಏಳು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರು, ಪ್ರಯಾಣಿಕರು ಹಾಗೂ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃಷ್ಣಾ ನದಿಗೆ ಸೇತುವೆ ನಿರ್ಮಾಣಕ್ಕಾಗಿ ಅಂದಿನ ಸಂಸದ ಹಾಗೂ ಈಗಿನ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಮತ್ತು ಈಗಿನ ಕಾಗವಾಡ ಶಾಸಕ ರಾಜು ಕಾಗೆ ಅವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆಯ ಮೂಲಕ 2017ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತು, 2018ರಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು.

ಉಗಾರ–ಕುಡಚಿ, ಜುಗುಳ–ಖಿದ್ರಾಪುರ ಹಾಗೂ ಮುಳವಾಡ–ಚಿಂಚಲಿ ಮಾರ್ಗಗಳಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮವಾಗಿ 38 ಕೋಟಿ, 18 ಕೋಟಿ ಹಾಗೂ 24 ಕೋಟಿ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಈ ಮೂರು ಸೇತುವೆಗಳ ಕಾಮಗಾರಿಯನ್ನು 2022ರೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕಾಗಿತ್ತು. ಆದರೆ 2026ನೇ ವರ್ಷ ಬಂದರೂ ಕಾಮಗಾರಿ ಇನ್ನೂ ಅಪೂರ್ಣವಾಗಿಯೇ ಉಳಿದಿದೆ.

ಕಾಮಗಾರಿಯನ್ನು ಬೆಂಗಳೂರಿನ ಬಿಎಸ್ಆರ್ ಕಂಪನಿ ವಹಿಸಿಕೊಂಡಿದ್ದು, ವಿವಿಧ ಕಾರಣಗಳನ್ನು ನೀಡಿ ಕಾಮಗಾರಿ ವಿಳಂಬಗೊಳಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಸೇತುವೆಗಳ ಮಧ್ಯಭಾಗದ ಕಾಮಗಾರಿ ಪೂರ್ಣಗೊಂಡಿದ್ದರೂ, ಎರಡೂ ಬದಿಗಳ ಸಂಪರ್ಕ ರಸ್ತೆ ಹಾಗೂ ಉಳಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಪ್ರತಿ ವರ್ಷ ಮಳೆಗಾಲದಲ್ಲಿ ಉಗಾರ–ಕುಡಚಿ ಸಂಪರ್ಕ ಸೇತುವೆ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಮಳೆಗಾಲದಲ್ಲಿ ಮಾತ್ರ ಈ ಸೇತುವೆಗಳ ಸಮಸ್ಯೆ ನೆನಪಾಗುತ್ತಿದ್ದು, ಉಳಿದ ಸಮಯದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಉಗಾರ–ಕುಡಚಿ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಾಗ ಕಾಗವಾಡ–ಜಮಖಂಡಿ ಮಾರ್ಗದ ವಾಹನಗಳು ಅಥಣಿ–ಹಾರೂಗೇರಿ ಕ್ರಾಸ್ ಮೂಲಕ ಸುಮಾರು 60 ಕಿಲೋಮೀಟರ್ ಸುತ್ತು ಬಳಸಿ ಸಂಚರಿಸಬೇಕಾಗುತ್ತದೆ. ಈ ಸಮಸ್ಯೆ ಎಲ್ಲರಿಗೂ ತಿಳಿದಿದ್ದರೂ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬೇಸರವನ್ನು ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನಹರಿಸಿ, ಸೇತುವೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Tags:

error: Content is protected !!