Uncategorized

ಬಳ್ಳಾರಿ ಘೋರ ದುರಂತ: ಜೆಸ್ಕಾಂ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಯುವ ಕಾರ್ಮಿಕ ಬಲಿ! ವಿದ್ಯುತ್ ಕಂಬದಲ್ಲೇ 15 ನಿಮಿಷ ನರಳಾಡಿ ಪ್ರಾಣಬಿಟ್ಟ ದುರ್ದೈವಿ

Share

ಬಳ್ಳಾರಿಯಲ್ಲಿ ಜೆಸ್ಕಾಂ ಅಧಿಕಾರಿಗಳು ಹಾಗೂ ಲೇಬರ್ ಗುತ್ತಿಗೆದಾರನ ಅತಿಯಾದ ನಿರ್ಲಕ್ಷ್ಯಕ್ಕೆ 22 ವರ್ಷದ ಹೆತ್ತ ಕರುಳೊಂದು ಕಂಬದ ಮೇಲೆಯೇ ಜೀವ ಬಿಟ್ಟಿರುವ ಅತ್ಯಂತ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ದಿನಗೂಲಿಗಾಗಿ ಕೆಲಸಕ್ಕೆ ಬಂದಿದ್ದ ಯುವಕನೊಬ್ಬ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ವಿದ್ಯುತ್ ಕಂಬದ ಮೇಲೆಯೇ ಹದಿನೈದು ನಿಮಿಷಗಳ ಕಾಲ ಸಾವಿನ ಭೀತಿಯಲ್ಲಿ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ.

ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದ ಬಳಿಯ ಧ್ಯಾನ ಮಂದಿರದ ಹತ್ತಿರ ಜೆಸ್ಕಾಂ ಇಲಾಖೆಯ ಲೇಬರ್ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮಿತಿಮೀರಿದ ನಿರ್ಲಕ್ಷ್ಯದಿಂದಾಗಿ ಭೀಕರ ದುರಂತವೊಂದು ಸಂಭವಿಸಿದೆ. ವಿದ್ಯುತ್ ಲೈನ್ ಸರಿಪಡಿಸಲು ಕಂಬ ಏರಿದ್ದ ಯರ್ರಗುಡಿ ಗ್ರಾಮದ ಹುಲಗಪ್ಪ (22) ಎಂಬ ಯುವ ದಿನಗೂಲಿ ಕಾರ್ಮಿಕ ಕರೆಂಟ್ ಶಾಕ್ ತಗುಲಿ ಕಂಬದ ಮೇಲೆಯೇ ಸಾವನ್ನಪ್ಪಿದ್ದಾನೆ. ಲೈನ್ ಕ್ಲಿಯರೆನ್ಸ್ (LC) ಪಡೆದುಕೊಳ್ಳದೆಯೇ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಯುವಕನನ್ನು ಕಂಬ ಹತ್ತಿಸಿದ್ದು, ಕೆಲಸ ಮಾಡುವ ಸಂದರ್ಭದಲ್ಲಿ ದಿಢೀರನೆ ವಿದ್ಯುತ್ ಪ್ರವಹಿಸಿದ್ದೇ ಈ ದುರಂತಕ್ಕೆ ನೇರ ಕಾರಣ ಎನ್ನಲಾಗಿದೆ.

ವಿದ್ಯುತ್ ಸ್ಪರ್ಶಿಸುತ್ತಿದ್ದಂತೆ ಯುವಕ ಹುಲಗಪ್ಪ ಕಂಬದ ಮೇಲೆಯೇ ನೇತಾಡುತ್ತಾ, ಸುಮಾರು 15 ನಿಮಿಷಗಳ ಕಾಲ “ಕಾಪಾಡಿ.. ಕಾಪಾಡಿ..” ಎಂದು ಕರುಣಾಜನಕವಾಗಿ ಕಿರುಚಾಡಿದ್ದಾನೆ. ಸ್ಥಳದಲ್ಲಿದ್ದ ಸಹ ಕಾರ್ಮಿಕರು ರಕ್ಷಣೆ ಮಾಡಲು ಮುಂದಾದರೂ, ವಿದ್ಯುತ್ ಪ್ರವಹಿಸುತ್ತಿದ್ದ ಕಾರಣ ಅಸಹಾಯಕರಾಗಿ ಕಣ್ಣೀರು ಹಾಕುತ್ತಾ ನಿಲ್ಲಬೇಕಾಯಿತು. ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳದಲ್ಲಿ ಸಂಬಂಧಪಟ್ಟ ಜೆಸ್ಕಾಂ ಅಧಿಕಾರಿಗಳಾಗಲಿ ಅಥವಾ ಲೈನ್‌ಮ್ಯಾನ್ ಆಗಲಿ ಇರಲಿಲ್ಲ ಎನ್ನಲಾಗಿದ್ದು, ತೀವ್ರ ನರಳಾಟದ ಬಳಿಕ ಯುವಕ ಕಂಬದ ಮೇಲೆಯೇ ಕೊನೆಯುಸಿರೆಳೆದಿದ್ದಾನೆ. ಸದ್ಯ ಈ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:

error: Content is protected !!