ಗಡಿ ವಿವಾದದ ಕುರಿತು ಮಹಾಜನ ವರದಿಯೇ ಅಂತಿಮವಾಗಿದ್ದು, ರಾಜ್ಯದ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದ್ದಾರೆ.

ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ಮಹಾರಾಷ್ಟ್ರದಲ್ಲಿ ಸಭೆಗಳು ನಡೆದಿದ್ದರೂ ಕರ್ನಾಟಕದ ಗಡಿ ಹಿತಾಸಕ್ತಿಯನ್ನು ನಮ್ಮ ಸರ್ಕಾರ ಬದ್ಧತೆಯಿಂದ ಕಾಪಾಡಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯವನ್ನು ಪಾಸ್ ಮಾಡುವ ಕುರಿತು ಶೀಘ್ರದಲ್ಲೇ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದರು. ಇನ್ನು ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ಅರಣ್ಯ ಸಚಿವರನ್ನು ಐದು ಬಾರಿ ಭೇಟಿ ಮಾಡಿದರೂ ಯಾವುದೇ ಉತ್ತರ ಬಂದಿಲ್ಲ. ಆದರೂ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ಯೋಜನೆ ಜಾರಿಗೆ ಸತತ ಪ್ರಯತ್ನ ಮುಂದುವರಿಸಲಾಗುವುದು ಎಂದು ತಿಳಿಸಿದರು.
ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ, ಇನ್ಮುಂದೆ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಆದೇಶಿಸಿದೆ. ದೇಣಿಗೆ ಎಣಿಕೆ ವೇಳೆ ಪೊಲೀಸ್ ಇಲಾಖೆಗೆ ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಇನ್ನು ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಕೈಗೊಂಡ ನಿರ್ಧಾರದಂತೆ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಆದರೆ ಮೃತರ ಖಾತೆಗೆ ಹಣ ಜಮೆ ಆಗದಂತೆ ತಡೆಯಲು ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗೆ ಹೊಸ ಮಾಹಿತಿಯನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಪ್ರತಿ ಬೂತ್ ಮಟ್ಟದಲ್ಲಿ ಸಹಾಯವಾಣಿ ಡೆಸ್ಕ್ ತೆರೆದು ಸಾರ್ವಜನಿಕರಿಗೆ ಉಚಿತ ವಾಸಸ್ಥಳ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ರೈತರ ಬೆಳೆ ವಿಮೆ ವಂಚನೆ ತಡೆಗೆ ಬೆಂಗಳೂರಿನಲ್ಲಿ ವಿಶೇಷ ಸಭೆ ಕರೆಯಲಾಗುವುದು. ಹತ್ತಕ್ಕೂ ಹೆಚ್ಚು ಶಾಸಕರು ಮೋಡ ಬಿತ್ತನೆಗೆ ಆಗ್ರಹಿಸಿದ್ದು, ಇತ್ತೀಚಿನ ಯಶಸ್ವಿ ಮೋಡ ಬಿತ್ತನೆಯ ವರದಿ ಆಧರಿಸಿ ಗಂಭೀರ ತೀರ್ಮಾನ ಕೈಗೊಳ್ಳಲಾಗುವುದು. ದೇಶದಲ್ಲೇ ಮೊದಲ ಬಾರಿಗೆ ಆಸ್ತಿ ದಾಖಲೆಗಳನ್ನು ಫೋಟೋ ಸಮೇತ ನೀಡುವ ‘ಭೂಮಿ ಗ್ಯಾರಂಟಿ’ ಇ-ಖಾತಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದೇ ವೇಳೆ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತ ರೈತರಿಗೆ ಹಂತ ಹಂತವಾಗಿ ನ್ಯಾಯಬದ್ಧ ಪರಿಹಾರ ಒದಗಿಸಲು ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಯು.ಟಿ.ಖಾದರ್, ಈಶ್ವರ್ ಖಂಡ್ರೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
