Kagawad

ರಾಷ್ಟ್ರೀಯ ಖಾದ್ಯ ತೈಲ ಮಿಷನ್ ಯೋಜನೆಯಡಿ ರೈತರಿಗೆ ಎಣ್ಣೆಕಾಳು ಬೆಳೆಗಳ ಕುರಿತು ತರಬೇತಿ

Share

ದೇಶದಲ್ಲಿ ಖಾದ್ಯ ತೈಲಗಳ ಆಮದನ್ನು ಕಡಿಮೆ ಮಾಡಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಖಾದ್ಯ ತೈಲ ಮಿಷನ್ ಯೋಜನೆಯಡಿ ರೈತರು ಎಣ್ಣೆಕಾಳು ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು ಎಂದು ಕೃಷಿ ತಜ್ಞರು ಕರೆ ನೀಡಿದರು.
ಬುಧವಾರ ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್ ಪಟ್ಟಣದ ಓಂಕಾರ ಬಯೋಟೆಕ್ ಸಂಸ್ಥೆಯ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಹಾಗೂ ಕಾಗವಾಡ ಕೃಷಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರೈತರಿಗೆ ಎಣ್ಣೆಕಾಳು ಬೆಳೆಗಳ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

ಕೃಷಿ ವಿಜ್ಞಾನ ಕೇಂದ್ರ, ತುಕ್ಕಾನಟ್ಟಿ ಕೇಂದ್ರದ ಬೇಸಾಯ ತಜ್ಞ ಮಾರುತಿ ಮಾಳವಾಡೆ ಮಾತನಾಡಿ, ದೇಶದಲ್ಲಿ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಖಾದ್ಯ ತೈಲ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ರೈತರು ಶೇಂಗಾ, ಸೋಯಾಬಿನ್, ಸೂರ್ಯಕಾಂತಿ ಸೇರಿದಂತೆ ಎಣ್ಣೆಕಾಳು ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು. ಪ್ರಸ್ತುತ ೧೨.೩೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆದು ೧೨.೨೦ ಲಕ್ಷ ಟನ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುವ ಅಡುಗೆ ಎಣ್ಣೆಗಳಲ್ಲಿ ಕಲಬೆರಕೆ ಇರುವ ಸಾಧ್ಯತೆ ಹೆಚ್ಚಿದ್ದು, ಇವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ ರೈತರು ತಾವೇ ಎಣ್ಣೆಕಾಳು ಬೆಳೆದು ಶುದ್ಧ ಎಣ್ಣೆ ಬಳಕೆಗೆ ಉತ್ತೇಜನ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ವಿಜ್ಞಾನಿ ಡಾ. ದತ್ತು ಮೈತ್ರೆ ರೈತರಿಗೆ ತರಬೇತಿ ನೀಡುತ್ತಾ, ದೇಶದಲ್ಲಿ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ೨೦೨೪ರಿಂದ ೨೦೩೦ರವರೆಗೆ ರಾಷ್ಟ್ರೀಯ ಖಾದ್ಯ ತೈಲ ಮಿಷನ್ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಪ್ರತಿಯೊಬ್ಬ ರೈತನಿಗೆ ಎಣ್ಣೆಕಾಳು ಬೆಳೆಗಳ ಕುರಿತು ತರಬೇತಿ ನೀಡಿ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.

ನಮ್ಮ ಸಂಸ್ಥೆಯ ವತಿಯಿಂದ ಗ್ರಾಮ ಗ್ರಾಮಗಳಿಗೆ ತೆರಳಿ ರೈತರಿಗೆ ಈ ಯೋಜನೆ ಹಾಗೂ ಎಣ್ಣೆಕಾಳು ಬೆಳೆಗಳ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಪ್ರತಿ ಕೆ.ಜಿ.ಗೆ ಸುಮಾರು ೧೮೦ ದರದಲ್ಲಿ ದೊರೆಯುತ್ತಿದ್ದು, ಶುದ್ಧ ಶೇಂಗಾ ಎಣ್ಣೆ ಉತ್ಪಾದಿಸಲು ಸುಮಾರು ೩೦೦ ವೆಚ್ಚವಾಗುತ್ತದೆ. ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವ ಅನೇಕ ಅಡುಗೆ ಎಣ್ಣೆಗಳಲ್ಲಿ ಕಲಬೆರಕೆ ಇರುವ ಸಾಧ್ಯತೆ ಹೆಚ್ಚಿದ್ದು, ಅವು ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಆದ್ದರಿಂದ ಪ್ರತಿಯೊಬ್ಬ ರೈತ ಎಣ್ಣೆಕಾಳು ಬೆಳೆದು ಶುದ್ಧ ಎಣ್ಣೆಯನ್ನು ಬಳಕೆ ಮಾಡಿದರೆ ಮಾತ್ರ ಭವಿಷ್ಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

ಕಾಗವಾಡ ತಾಲೂಕು ಕೃಷಿ ಅಧಿಕಾರಿ ಕಾಂತಿನಾಥ ಬಿರಾದಾರ್ ಮಾತನಾಡಿ, ಕಾಗವಾಡ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸುಮಾರು ೬೫೦ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆ ಬೆಳೆಯಲಾಗುತ್ತಿದೆ. ರೈತರು ಅಂತರ ಬೆಳೆಯಾಗಿ ಶೇಂಗಾ, ಸೋಯಾಬಿನ್ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶೇಡಬಾಳ ಹಾಗೂ ಸುತ್ತಮುತ್ತಲಿನ ನೂರಾರು ರೈತರು ಭಾಗವಹಿಸಿ ಎಣ್ಣೆಕಾಳು ಬೆಳೆಗಳ ಬೇಸಾಯ, ಮಾರುಕಟ್ಟೆ ಹಾಗೂ ಆರೋಗ್ಯದ ಕುರಿತು ಕೃಷಿ ತಜ್ಞರೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಮಿರ್ಯಕಲ್ ಮಣ್ಣು ಪರೀಕ್ಷೆ ಕೇಂದ್ರದ ಮಹಾದೇವ ಕೊಳೇಕರ್, ಕಾಗವಾಡ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರವೀಣ್ ದೇಸಾಯಿ, ಸಮೇದ ಮಗದೂಮ್, ಕೆನರಾ ಬ್ಯಾಂಕ್ ಸಿಬ್ಬಂದಿ ಬಸವರಾಜ ಬೊಮ್ಮನಾಳ, ಸೆಲ್ಕೋ ಸೋಲಾರ್ ಕಂಪನಿಯ ಪ್ರತಿನಿಧಿ ಬಸವರಾಜ ಅಗಸರ, ಪ್ರಗತಿಪರ ರೈತರಾದ ಅಪ್ಪಾಸಾಹೇಬ ಪಾಟೀಲ, ಸುರೇಶ್ ಕಾಂಬಳೆ, ವಿರೂಪಾಕ್ಷ ಮಾಂಗೂರ, ಶೀತಲ್ ಹೇರಲೆಕರ್, ಲಿಂಗರಾಜ ಅನಿಗೇರಿ, ಅಣ್ಣಾಸಾಹೇಬ ಭುಜಪಗೂಳ, ಬಸಗೌಡ ಘೆನಪ್ಪಗೋಳ, ಅರುಣ ಶಿರದವಾಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಳಿಕ ಅತ್ಯುತ್ತಮವಾಗಿ ಶೇಂಗಾ ಬೆಳೆ ಬೆಳೆದಿದ್ದ ರೈತರಾದ ಸುದರ್ಶನ್ ಬನ್ನೂರೆ, ರಾಜು ಬನ್ನೂರೆ ಹಾಗೂ ದರ್ಶನ್ ಬನ್ನೂರೆ ಅವರ ಜಮೀನಿಗೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಭೇಟಿ ನೀಡಿ, ಬೆಳೆ ನಿರ್ವಹಣೆ, ಗೊಬ್ಬರ ಹಾಗೂ ಕೀಟನಾಶಕ ಬಳಕೆಯ ಕುರಿತು ಸಲಹೆ ನೀಡಿ ಬೆಳೆ ವೀಕ್ಷಣೆ ನಡೆಸಿದರು.

ಸುಕುಮಾರ್ ಬನ್ನೂರೆ
ಇನ್ ನ್ಯೂಸ್, ಕಾಗವಾಡ

Tags:

error: Content is protected !!