Vijaypura

ಬತ್ತಿ ಹೋಗಿದ್ದ ಮಲಪ್ರಭೆಗೆ ಮರುಜೀವ: ಹೊಸ ನೀರಿನ ಹರಿವಿಗೆ ರೈತಾಪಿ ವರ್ಗ ನಿರಾಳ!

Share

ಬೆಳಗಾವಿ ಜಿಲ್ಲೆ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಬತ್ತಿ ಹೋಗಿದ್ದ ಮಲಪ್ರಭಾ ನದಿ ಈಗ ಮತ್ತೆ ಮರುಜೀವ ಪಡೆದುಕೊಂಡಿದೆ. ಕೇವಲ ಹದಿನೈದು ದಿನಗಳ ಹಿಂದೆ ನೀರಿನ ತೀವ್ರ ಸಮಸ್ಯೆಯಿಂದ ಕಂಗಾಲಾಗಿದ್ದ ಜನ ಹಾಗೂ ಜಾನುವಾರುಗಳಿಗೆ ಈ ಹೊಸ ನೀರಿನ ಹರಿವು ನಿರಾಳತೆ ತಂದಿದೆ. ಬೈಲಹೊಂಗಲ ಭಾಗದಲ್ಲಿ ನದಿ ಕಂಗೊಳಿಸುತ್ತಿರುವ ದೃಶ್ಯದ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ಕಳೆದ ಮೂರು-ನಾಲ್ಕು ದಿನಗಳಿಂದ ಪಶ್ಚಿಮ ಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಸತತ ಮಳೆಯಿಂದಾಗಿ ಮಲಪ್ರಭಾ ನದಿಯ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಹದಿನೈದು ದಿನಗಳ ಹಿಂದೆ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿದ್ದರಿಂದ ಆತಂಕದಲ್ಲಿದ್ದ ನದಿ ಪಾತ್ರದ ಗ್ರಾಮಗಳ ಜನತೆ ಹಾಗೂ ರೈತರ ಮುಖದಲ್ಲಿ ಈಗ ಮಂದಹಾಸ ಮೂಡಿದೆ. ನದಿಯ ಮೇಲ್ಭಾಗದಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಎದುರಾಗಿದ್ದ ನೀರಿನ ಭೀತಿ ದೂರವಾಗಿದ್ದು, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಗೂ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಮೂಲಕ ಸಮೃದ್ಧವಾಗಿ ಹರಿಯುತ್ತಿರುವ ಮಲಪ್ರಭೆಯ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ನದಿ ತೀರಕ್ಕೆ ಸಾರ್ವಜನಿಕರು ಲಗ್ಗೆ ಇಡುತ್ತಿದ್ದಾರೆ. ಪ್ರಕೃತಿಯ ಈ ಸೌಂದರ್ಯವು ಕೃಷಿ ವಲಯಕ್ಕೆ ಹೊಸ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿ ಮಳೆ ಮುಂದುವರಿದರೆ ಈ ಭಾಗದ ಜಲಾಶಯಗಳು ಭರ್ತಿಯಾಗುವುದರ ಜೊತೆಗೆ ಅಂತರ್ಜಲ ಮಟ್ಟವೂ ಕೂಡ ಗಣನೀಯವಾಗಿ ವೃದ್ಧಿಸಲಿದೆ ಎಂದು ಸ್ಥಳೀಯರು ಆಶಿಸಿದ್ದಾರೆ.

ಶಾನೂಲ ಮತ್ತೆಖಾನ, ಇನ್ ನ್ಯೂಜ್, ಬೈಲಹೊಂಗಲ.

Tags:

error: Content is protected !!