hubbali

ಹು-ಧಾ ಪಾಲಿಕೆ ಮೇಯರ್ ,ಉಪಮೇಯರ್ ಮತ್ತೆ ಬಿಜೆಪಿ ಪಾಲು

Share

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆ ನಗರದ ಪಾಲಿಕೆಯ ಸಭಾ ಭವನದಲ್ಲಿ ಚುನಾವಣೆ ನಡೆದಿದ್ದು, ಮೇಯರ್ ಸ್ಥಾನದ ಪರಿಶಿಷ್ಟ ಜಾತಿಯ ಕೋಟಾದಡಿ ಈ ಹಿಂದೆ ಉಪಮೇಯರ್ ಹುದ್ದೆ ನಿರ್ವಹಿಸಿದ್ದ ದುರ್ಗಮ್ಮ ಬಿಜವಾಡ ಆಯ್ಕೆಯಾದರೆ ಸಾಮಾನ್ಯ ವರ್ಗದ ಉಪಮೇಯರ್ ಸ್ಥಾನಕ್ಕೆ ರತ್ನಾಭಾಯಿ ನಾಝರೆ ಆಯ್ಕೆಗೊಂಡಿದ್ದು ಮತ್ತೆ ಪಾಲಿಕೆಯ ಆಡಳಿತ ಬಿಜೆಪಿಯ ಪಾಲಾಗಿದೆ.

24 ನೇ ಅವಧಿಗೆ ಧಾರವಾಡಕ್ಕೆ ಮೇಯರ್ ಸ್ಥಾನ ಲಭ್ಯವಾಗಿತ್ತು, ಇದೀಗ ಹುಬ್ಬಳ್ಳಿಗೆ ಮೇಯರ್ ಸ್ಥಾನ ಲಭ್ಯವಾಗಿದೆ. 25 ಅವಧಿಯ ಮೇಯರ್ ಸ್ಥಾನಕ್ಕೆ ಹುಬ್ಬಳ್ಳಿಯ ವಾರ್ಡ್ ನಂ. 69 ರ ದುರ್ಗಮ್ಮ ಬಿಜವಾಡ ಆಕಾಂಕ್ಷಿಗಳಾಗಿದ್ದರೆ ಉಪಮೇಯರ್ ಸ್ಥಾನಕ್ಕೆ ಧಾರವಾಡದ ವಾರ್ಡ್ ನಂ. 9 ರ ರತ್ನಾಭಾಯಿ ನಾಝರೆ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್ ನಿಂದ ವಾರ್ಡ್ ನಂ. 20 ರ ಕವಿತಾ ಕಬ್ಬೇರ್ ಮೇಯರ್ ಸ್ಥಾನಕ್ಕೆ ಹಾಗೂ ವಾರ್ಡ್ ನಂ. 6 ರ ದಿಲ್ಶಾದ್ ಬೇಗಂ ನದಾಫ್ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಗಿತ್ತು.
ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಂಸದರಾದ ಪ್ರಲ್ಹಾದ್ ಜೋಶಿ, ಎಂ. ನಾಗರಾಜ್, ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್ ಎಸ್.ವಿ‌ ಸಂಕನೂರ, ಲಿಂಗರಾಜ ಪಾಟೀಲ್ ಅವರು ಬೆಂಬಲ ವ್ಯಕ್ತಪಡಿಸಿದರೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಾಸಕರಾದ ಪ್ರಸಾದ್ ಅಬ್ಬಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಎಫ್. ಜಕ್ಕಪ್ಪನವರ ಬೆಂಬಲ ವ್ಯಕ್ತಪಡಿಸಿದರು.

92 ರ ಪಾಲಿಕೆ ಸಂಖ್ಯಾಬಲದಲ್ಲಿ 88 ಸದಸ್ಯರು ಹಾಜರಾಗಿದ್ದು, ನಾಲ್ವರು ಸದಸ್ಯರು ಗೈರಾಗಿದ್ದಾರೆ. ಇದೀಗ ಮೇಯರ್ ಆಗಿ ದುರ್ಗಮ್ಮ ಬಿಜವಾಡ ಅವರು 50 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಕವಿತಾ ಕಬ್ಬೇರ್ 32 ಮತಗಳನ್ನು ಪಡೆದರು ಹಾಗೂ ಉಪಮೇಯರ್ ಆಗಿ ರತ್ನಾಭಾಯಿ ನಾಝರೆ ಅವರು 50 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ಎಮ್ ಜಾನಕಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ‌. ಇದೀಗ ಪಾಲಿಕೆಯ ಆಡಳಿತಾರೂಢ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ದುರ್ಗಮ್ಮ ಬಿಜವಾಡ ಅವರು ಒಂದೇ ಅವಧಿಯಲ್ಲಿ ಉಪಮೇಯರ್ ಸ್ಥಾನ ನಿರ್ವಹಿಸಿ ಇದೀಗ ಮೇಯರ್ ಸ್ಥಾನ ಅಲಂಕರಿಸುತ್ತಿರುವುದು ವಿಶೇಷವಾಗಿದೆ‌.
ಚುನಾವಣಾ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತರಾದ ಎಸ್.ಎಸ್. ಬಿರಾದಾರ ಹಾಗೂ ಪಾಲಿಕೆ ಆಯುಕ್ತ ಲರಾದ ರುದ್ರೇಶ ಘಾಳಿ ಇದ್ದರು.

Tags:

error: Content is protected !!