ಖಾನಾಪೂರ-ಹಳಿಯಾಳ ರಾಜ್ಯ ಹೆದ್ದಾರಿಯ ನಂದಗಡದ ಬೀಡಿ ರಸ್ತೆಯಲ್ಲಿ ಭಾರಿ ಅನಾಹುತವೊಂದು ಸಂಭವಿಸಿದೆ. ಚಲಿಸುತ್ತಿದ್ದ ರಸ್ತೆಯ ಮೇಲೆಯೇ ಬೃಹತ್ ಮಾವಿನ ಮರ ಉರುಳಿಬಿದ್ದಿದ್ದು, ಓರ್ವ ವೃದ್ಧ ತೀವ್ರವಾಗಿ ಗಾಯಗೊಂಡರೆ, ಎರಡು ದ್ವಿಚಕ್ರ ವಾಹನಗಳು ಹಾಗೂ ವಿದ್ಯುತ್ ಕಂಬಗಳು ಜಖಂಗೊಂಡಿವೆ. ಸದ್ಯ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದ್ದಾರೆ.


ಖಾನಾಪೂರದ ನಂದಗಡ-ಬೀಡಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇದ್ದ ಹಳೆಯ ಬೃಹತ್ ಮಾವಿನ ಮರವೊಂದು ದಿಢೀರನೆ ರಸ್ತೆಯ ಮೇಲೆ ಉರುಳಿಬಿದ್ದಿದೆ. ಈ ಭೀಕರ ಘಟನೆಯಲ್ಲಿ ನರಸೇವಾಡಿ ಗ್ರಾಮದ ಪುಂಡಲೀಕ ದೇವಪ್ಪ ಪಾಟೀಲ್ ಎಂಬ ವೃದ್ಧನ ಎರಡು ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ನಂದಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮರ ಬಿದ್ದ ರಭಸಕ್ಕೆ ಹೆದ್ದಾರಿಯಲ್ಲಿದ್ದ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಎರಡು ಬೈಕ್‌ಗಳು ಸಂಪೂರ್ಣ ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಪೊಲೀಸ್ ಹವಾಲ್ದಾರ್ ಶಿವುಕುಮಾರ ತುರಮುರಿ ಅವರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ನಂತರ ನಂದಗಡ ಉಪ ವಲಯ ಅರಣ್ಯಾಧಿಕಾರಿ ಮಾಧುರಿ ದಳವಾಯಿ ಅವರ ನಿರ್ದೇಶನದ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಗುರುಪ್ಪ ಕುಂಬಾರ, ಶ್ರೀಕಾಂತ್ ತಾರಿಹಾಳ ಹಾಗೂ ಪ್ರಶಾಂತ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ಜೆಸಿಬಿ ಹಾಗೂ ಕಟಿಂಗ್ ಯಂತ್ರಗಳ ಸಹಾಯದಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರವನ್ನು ತೆರವುಗೊಳಿಸಿ, ಗಂಟೆಗಟ್ಟಲೆ ಸ್ಥಗಿತಗೊಂಡಿದ್ದ ಸಂಚಾರವನ್ನು ಸುಗಮಗೊಳಿಸಿದರು. ಮಳೆಗಾಲಕ್ಕೂ ಮುನ್ನವೇ ಇಂತಹ ಅಪಾಯಕಾರಿ ಒಣಗಿದ ಮರಗಳನ್ನು ಗುರುತಿಸಿ ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಾದರೂ ಸಾರ್ವಜನಿಕರ ಜೀವ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
