Khanapur

ಖಾನಾಪುರದಲ್ಲಿ ಮತಾಂತರಕ್ಕೆ ಯತ್ನ ಆರೋಪ; ಮನೆಗೆ ನುಗ್ಗಿ ಬಜರಂಗದಳ ತರಾಟೆ, ಪೊಲೀಸರ ಎಂಟ್ರಿ!

Share

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಮತಾಂತರದ ಸುಳಿವು ಬೆನ್ನತ್ತಿದ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಆರೋಪಿಗಳು ಕಾಲ್ಕಿತ್ತಿದ್ದು, ಸದ್ಯ ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕೇರಿ ಗ್ರಾಮದಲ್ಲಿ ಬಡ ಕುಟುಂಬಗಳನ್ನು ಗುರಿಯಾಗಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗ್ರಾಮದ ಮನೆಯೊಂದರಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆ ಸಲ್ಲಿಸುತ್ತಿದ್ದ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಜರಂಗದಳದ ಕಾರ್ಯಕರ್ತರು, ಇಡೀ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಮತಾಂತರ ಪ್ರಕ್ರಿಯೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ; ಈ ವೇಳೆ ಕಾರ್ಯಕರ್ತರ ಆಕ್ರೋಶಕ್ಕೆ ಹೆದರಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಕಾನೂನುಬಾಹಿರ ಧಾರ್ಮಿಕ ಚಟುವಟಿಕೆಯ ಸಮಗ್ರ ತನಿಖೆಗೆ ಬಜರಂಗದಳ ಆಗ್ರಹಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ನಂದಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ “ತಾವು ಮತಾಂತರವಾಗಿಲ್ಲ” ಎಂದು ಸಂಬಂಧಿತ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮತ್ತೊಮ್ಮೆ ಇಂತಹ ಘಟನೆಗಳು ಮರುಕಳಿಸಿದರೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಿ ಪೊಲೀಸರು ವಾಪಸ್ ಬಂದಿದ್ದಾರೆ.

Tags:

error: Content is protected !!