ಹೆಂಡತಿಯ ಮೇಲಿನ ಸಂಶಯಕ್ಕೆ ಮಲಗಿದ್ದ ಹೆಂಡತಿಗೆ ಗಂಡ ಕೊಚ್ಚಿ ಕೊಲೆ ಮಾಡಿದ ಘಟನೆ ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಶೋಭಾ ಪರಗೊಂಡ ಸಾರವಾಡ ಎಂದು ಗುರುತಿಸಲಾಗಿದೆ. ಆರೋಪಿ ಗಂಡ ಪರಗೊಂಡ, ಹೆಂಡತಿ ಮಲಗಿದ್ದ ವೇಳೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೃತ ಶೋಭಾ ಹಾಗೂ ಆರೋಪಿ ಪರಗೊಂಡ ಮೂಲತಃ ಅಥಣಿ ತಾಲೂಕಿನ ಖವಟಖೊಪ್ಪ ಗ್ರಾಮದ ನಿವಾಸಿಗಳಾಗಿದ್ದು, ಕಳೆದ ಕೆಲ ಸಮಯದಿಂದ ಉದ್ಯೋಗ ನಿಮಿತ್ತ ಅವಜೀಕರ ಮಠದಲ್ಲಿ ವಾಸವಿದ್ದು ಕೆಲಸ ಮಾಡುತ್ತಿದ್ದರು. ಶೋಭಾ ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರೆ, ಪರಗೊಂಡ ಅದೇ ಮಠದಲ್ಲಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದನು.
ದಂಪತಿಗಳ ನಡುವೆ ಕಳೆದ ಕೆಲ ದಿನಗಳಿಂದ ಕುಟುಂಬ ಕಲಹ ಹಾಗೂ ಅನುಮಾನಗಳು ಹೆಚ್ಚಾಗಿದ್ದವು. ಇದೇ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಅನುಮಾನವೇ ಕೊಲೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಆತಂಕ ವ್ಯಕ್ತಪಡಿಸಿದರು. ಇಂತಹ ಭೀಕರ ಘಟನೆ ನಡೆದಿರುವುದರಿಂದ ಕಟಗೇರಿ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ಅಥಣಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
