ಖಾನಾಪುರದ ಪ್ರತಿಷ್ಠಿತ ಸರ್ವೋದಯ ಶಾಲೆಯಲ್ಲಿ ನೂತನ ಶಾಲಾ ಸಂಸತ್ತು ರಚನೆ ಹಾಗೂ ನೂತನ ಸಂಸತ್ ಸದಸ್ಯರ ಪದಗ್ರಹಣ ಕಾರ್ಯಕ್ರಮ ಅತ್ಯಂತ ಸಡಗರದಿಂದ ನೆರವೇರಿತು. ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಗೂ ಜವಾಬ್ದಾರಿಯುತ ನಾಯಕತ್ವದ ಗುಣಗಳನ್ನು ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಖಾನಾಪುರದ ಸರ್ವೋದಯ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭದಲ್ಲಿ ಪ್ರಾಥಮಿಕ ಶಾಲಾ ವಿಭಾಗದಿಂದ 74 ಹಾಗೂ ಪ್ರೌಢಶಾಲಾ ವಿಭಾಗದಿಂದ 133 ಸೇರಿದಂತೆ ಒಟ್ಟು 207 ವಿದ್ಯಾರ್ಥಿಗಳು ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿ ನೂತನ ಬಾಲ ಸಂಸದರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಶಾಲೆಯ ಪ್ರಾಂಶುಪಾಲರಾದ ಫಾದರ್ ನೆಲ್ಸನ್ ಪಿಂಟೋ ಅವರು, ವಿದ್ಯಾರ್ಥಿ ದೆಸೆಯಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಮೂಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರಲ್ಲದೆ, ಸಮಾಜಕ್ಕೆ ಮಾದರಿಯಾಗುವಂತಹ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು. ಈ ಅತ್ಯಾಕರ್ಷಕ ಪದಗ್ರಹಣ ಮಹೋತ್ಸವದಲ್ಲಿ ಶಾಲೆಯ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ನೂರಾರು ಪಾಲಕರು ಉಪಸ್ಥಿತರಿದ್ದು ನೂತನ ಬಾಲ ನಾಯಕರಿಗೆ ಶುಭ ಹಾರೈಸಿದರು.

