Khanapur

ದಲಿತ ಮಕ್ಕಳ ಮೇಲಿನ ಅಸ್ಪೃಶ್ಯತೆ ಖಂಡನೆ: ಜೂನ್ 29ಕ್ಕೆ ಖಾನಾಪುರದ ಬೀಡಿ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ!

Share

ಖಾನಾಪುರ ತಾಲೂಕಿನಲ್ಲಿ ದಲಿತ ಶಾಲಾ ಮಕ್ಕಳಿಗೆ ಮಹಾಪ್ರಸಾದ ವಿತರಣೆ ವೇಳೆ ಅಸ್ಪೃಶ್ಯತೆ ತೋರಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿ ದಿನಗಳೇ ಕಳೆದರೂ ಆರೋಪಿಗಳನ್ನು ಬಂಧಿಸದ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ವಿವಿಧ ದಲಿತ ಸಂಘಟನೆಗಳು, ಮುಂಬರುವ ಸೋಮವಾರ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ.

ಇಂದು ಖಾನಾಪುರ ಪ್ರವಾಸಿ ಮಂದಿರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಅವರು, ಜೂನ್ 23 ರಂದು ತಾಲೂಕಿನ ಚಿಕ್ಕ ಅಂಗ್ರೋಳ್ಳಿ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಮಹಾಪ್ರಸಾದ ನೀಡುವಾಗ ಸಾರ್ವಜನಿಕವಾಗಿ ದೂರ ಕೂರಿಸಿ ಅಸ್ಪೃಶ್ಯತೆ ಎಸಗಿದ ದಾರುಣ ಘಟನೆ ನಡೆದಿದೆ ಎಂದು ತಿಳಿಸಿದರು. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದರೂ, ಇದುವರೆಗೆ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸದಿರುವುದು ಖಂಡನೀಯ ಎಂದ ಅವರು, ಆರೋಪಿಗಳ ತಕ್ಷಣದ ಬಂಧನಕ್ಕೆ ಆಗ್ರಹಿಸಿ ಸೋಮವಾರ (ಜೂನ್ 29) ಮುಂಜಾನೆ ಬಿಡಿ ಹೋಬಳಿ ಸರ್ಕಲ್‌ನಲ್ಲಿ ವಿವಿಧ ದಲಿತ ಸಂಘಟನೆಗಳ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಚ್ಚರಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಮುಖಂಡರಾದ ಶರದ್ ಹೊನ್ನನಾಯಕ, ರಾಯಪ್ಪ ಚಲವಾದಿ, ರಾಘವೇಂದ್ರ ಚಲವಾದಿ, ಈರಪ್ಪ ಮಾದರ, ಮಹಾಂತೇಶ ಪಾತ್ರದಾರ್, ದುರ್ಗಪ್ಪ ಚಲವಾದಿ, ಬಸವರಾಜ ಮಾದರ, ನಾಗೇಶ್ ಕಾಂಬಳೆ, ಶಶಿಧರ ನಾಯಕ್, ಕಲ್ಲಪ್ಪ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!