ಕೇವಲ ಧಾರ್ಮಿಕ ಆಚರಣೆಯಾಗುಳಿಯದೆ ಮಾನವೀಯತೆಯ ಸಂದೇಶ ಸಾರುವ ಮೊಹರಂ ಹಬ್ಬಕ್ಕೆ ಬೆಳಗಾವಿಯ ಹಲಗಾ ಗ್ರಾಮ ಸೌಹಾರ್ದತೆಯ ಮುಕುಟವಿಟ್ಟಿದೆ. ಹಿಂದೂ-ಮುಸ್ಲಿಂ ಬಾಂಧವ್ಯದ ಮೂಲಕ ದೇಶಕ್ಕೇ ಮಾದರಿಯಾದ ಈ ಗ್ರಾಮದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಒಂದು ವಿಶೇಷ ವರದಿ ಇಲ್ಲಿದೆ.


ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿದ್ದರೂ, ಇದು ಕೇವಲ ಹೊಸ ವರ್ಷದ ಆಚರಣೆಯಲ್ಲ. ಇಸ್ಲಾಂ ಇತಿಹಾಸದಲ್ಲಿ ಕರ್ಬಲಾ ಭೂಮಿಯಲ್ಲಿ ಸತ್ಯ ಮತ್ತು ನ್ಯಾಯಕ್ಕಾಗಿ ಪ್ರಾಣತ್ಯಾಗ ಮಾಡಿದ ಇಮಾಮ್ ಹುಸೇನ್ ಮತ್ತು ಅವರ ಸಹಚರರ ಬಲಿದಾನದ ಸ್ಮರಣೆಯ ಪವಿತ್ರ ಕಾಲವಿದು. ಅನ್ಯಾಯದ ವಿರುದ್ಧ ಹೋರಾಡಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಈ ದಿನಗಳು ಜಗತ್ತಿಗೆ ಶಾಂತಿ ಮತ್ತು ಶ್ರದ್ಧೆಯ ಸಂದೇಶವನ್ನು ಸಾರುತ್ತವೆ.
ಬೆಳಗಾವಿ ತಾಲೂಕಿನ ಹಲಗಾ ಗ್ರಾಮವು ಈ ಧಾರ್ಮಿಕ ಪರಂಪರೆಯನ್ನು ಸಾಮಾಜಿಕ ಸಾಮರಸ್ಯದ ಉತ್ಸವವನ್ನಾಗಿ ಪರಿವರ್ತಿಸಿದೆ. ಇಲ್ಲಿನ ಹಜರತ್ ಬೀಬಿ ಫಾತಿಮಾ ದರ್ಗಾದಲ್ಲಿ ತಲೆಮಾರುಗಳಿಂದ ಮೊಹರಂ ಆಚರಿಸಲಾಗುತ್ತಿದ್ದು, ಇದು ಇಡೀ ಗ್ರಾಮದ ಹಬ್ಬವಾಗಿದೆ.

ಇಲ್ಲಿನ ತಾಬೂತ್ (ಡೋಲಿ) ಮೆರವಣಿಗೆಯು ಗ್ರಾಮದ ಹಿಂದೂ ದೇವಸ್ಥಾನಗಳಿಗೂ ಭೇಟಿ ನೀಡುತ್ತದೆ. ಮುಲ್ಲಾ ಪರಿವಾರವು ದರ್ಗಾದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರೆ, ಬೆಳಗೋಜಿ ಕುಟುಂಬವು ಮುಖ್ಯ ಸೇವಕತ್ವದ ಗೌರವವನ್ನು ಹೊಂದಿರುವುದು ಇಲ್ಲಿನ ಕೋಮು ಸೌಹಾರ್ದತೆಗೆ ಹಿಡಿದ ಕನ್ನಡಿಯಾಗಿದೆ. ಬೈಟ್
ಮೆರವಣಿಗೆಯಲ್ಲಿನ ಮಜ್ನೂ ನೃತ್ಯ, ಕೆಂಡ ಹಾಯುವ ಇಂಗಳದ ವಿಧಿಗಳು ಗ್ರಾಮದ ಸಾಂಸ್ಕೃತಿಕ ಗುರುತಿನ ಅವಿಭಾಜ್ಯ ಅಂಗವಾಗಿವೆ. ಪ್ರತಿ ಗುರುವಾರ ದರ್ಗಾಕ್ಕೆ ಬರುವ ಭಕ್ತರು ಹರಕೆ ಹೊತ್ತುಕೊಳ್ಳುತ್ತಾರಲ್ಲದೆ, ಮೊಹರಂ ಸಮಯದಲ್ಲಿ ಅದನ್ನು ತೀರಿಸುತ್ತಾರೆ. ಗ್ರಾಮದ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ಶ್ರದ್ಧೆಯಿಂದ ಈ ಆಚರಣೆಯಲ್ಲಿ ಭಾಗಿಯಾಗುತ್ತಾರೆ. ಇಂದಿನ ಆಧುನಿಕ ಕಾಲದಲ್ಲೂ ಜಾತಿ, ಮತ ಭೇದ ಮರೆತು “ನಾವೆಲ್ಲರೂ ಒಂದೇ” ಎಂಬ ಭಾವನೆಯೊಂದಿಗೆ ಆಚರಿಸಲಾಗುವ ಹಲಗಾ ಗ್ರಾಮದ ಮೊಹರಂ, ಭಾರತದ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ಮೌಲ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
