Bagalkote

ವಿಶ್ವವಿದ್ಯಾಲಯ ಬಳಿ ಶೌಚಾಲಯ ಬೇಡ, ಬಸ್ ನಿಲ್ದಾಣ ಮಾಡಿ: ಜಮಖಂಡಿ ವಿದ್ಯಾರ್ಥಿಗಳ ಆಕ್ರೋಶ!

Share

ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಶ್ವವಿದ್ಯಾಲಯದ ಆವರಣದ ಬಳಿ ಈಗ ಹೊಸದೊಂದು ವಿವಾದ ಸೃಷ್ಟಿಯಾಗಿದೆ. ಶೈಕ್ಷಣಿಕ ಕೇಂದ್ರದ ಪ್ರಮುಖ ರಸ್ತೆಯಲ್ಲೇ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗುತ್ತಿರುವುದಕ್ಕೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅದರ ಬದಲಿಗೆ ಸುಸಜ್ಜಿತ ಬಸ್ ನಿಲ್ದಾಣ ಕಲ್ಪಿಸುವಂತೆ ಪೌರ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಶ್ವವಿದ್ಯಾಲಯದ ಆವರಣದ ಸಮೀಪ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭವಾಗಿರುವುದು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಂಚರಿಸುವ ಈ ಪ್ರಮುಖ ಮಾರ್ಗದಲ್ಲಿ ಶೌಚಾಲಯ ನಿರ್ಮಿಸುವುದರಿಂದ ತೀವ್ರ ದುರ್ವಾಸನೆ, ಅಸ್ವಚ್ಛತೆ ಹಾಗೂ ಪರಿಸರ ಮಾಲಿನ್ಯ ಉಂಟಾಗಲಿದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದಾಗಿ ಶೈಕ್ಷಣಿಕ ವಾತಾವರಣಕ್ಕೆ ಸಂಪೂರ್ಣ ಧಕ್ಕೆ ಉಂಟಾಗುವ ಸಾಧ್ಯತೆ ಇದ್ದು, ತಕ್ಷಣವೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಶೌಚಾಲಯದ ಬದಲಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸುಸಜ್ಜಿತ ಬಸ್ ತಂಗುದಾಣವನ್ನು ನಿರ್ಮಿಸಿಕೊಡುವಂತೆ ವಿದ್ಯಾರ್ಥಿ ಸಮೂಹ ಮನವಿ ಮಾಡಿದೆ. ಪ್ರತಿನಿತ್ಯ ಬಸ್ಸಿಗಾಗಿ ಕಾಯುವ ನೂರಾರು ವಿದ್ಯಾರ್ಥಿಗಳಿಗೆ ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಸೂಕ್ತ ಬಸ್ ಶೆಲ್ಟರ್ ಅತ್ಯಗತ್ಯವಾಗಿದ್ದು, ಸುರಕ್ಷಿತ ಸಾರಿಗೆ ಸೌಲಭ್ಯ ಕಲ್ಪಿಸುವುದು ಆಡಳಿತದ ಆದ್ಯತೆಯಾಗಬೇಕಿದೆ. ಈ ಕುರಿತು ವಿದ್ಯಾರ್ಥಿಗಳ ಹಿತ ಕಾಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೌರ ಆಯುಕ್ತರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ.

Tags:

error: Content is protected !!