ಬೆಳಗಾವಿಯ ಹೊರವಲಯದಲ್ಲಿರುವ ಹಿಂಡಾಲ್ಕೋ ಕಂಪನಿಯಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಕೆಲಸ ಮುಂದುವರಿಸಲು ಗುತ್ತಿಗೆದಾರ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇಸತ್ತು ಯುವ ಕಾರ್ಮಿಕನೊಬ್ಬ ವಾಟ್ಸಪ್ ಸ್ಟೇಟಸ್ನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಿಂಡಾಲ್ಕೋ ಕಂಪನಿಯ ಮುಂಭಾಗ ನೂರಾರು ಜನ ಜಮಾಯಿಸಿದ್ದು, ಕಲ್ಲು ತೂರಾಟ ನಡೆಸಿದ ಕಾರಣ ಸ್ಥಳದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಬೆಳಗಾವಿ ತಾಲೂಕಿನ ಮುತ್ತ್ಯಾನಟ್ಟಿ ಗ್ರಾಮದ ನಿವಾಸಿಯಾದ ಶಂಕರ್ ತಳವಾರ (24) ಎಂಬ ಯುವಕ ಹಿಂಡಾಲ್ಕೋ ಕಂಪನಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಶಂಕರ್ ಆತ್ಮಹತ್ಯೆಗೂ ಮುನ್ನ ತನ್ನ ವಾಟ್ಸಪ್ ಸ್ಟೇಟಸ್ನಲ್ಲಿ ಸುದೀರ್ಘ ಡೆತ್ ನೋಟ್ ಒಂದನ್ನು ಹಂಚಿಕೊಂಡಿದ್ದು, ತನ್ನ ಸಾವಿಗೆ ಹಿಂಡಾಲ್ಕೋ ಕಂಪನಿ ಹಾಗೂ ಪೈಯಾಲ್ ನಂದಿ ಕಾಂಟ್ರಾಕ್ಟರನ ಕಿರುಕುಳವೇ ನೇರ ಕಾರಣ ಎಂದು ಉಲ್ಲೇಖಿಸಿದ್ದಾನೆ. ಹಳೇ ಕಾರ್ಮಿಕರನ್ನು ತೆಗೆದು ಹೊಸಬರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದ ಗುತ್ತಿಗೆದಾರ ಪೈಯಾಲ್ ನಂದಿ, ಊರಿನ ಜನರ ಬದಲೂ ತಮ್ಮ ಸಂಬಂಧಿಕರನ್ನೇ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದಾನೆ. ಕೆಲಸ ಮುಂದುವರಿಸಬೇಕಾದರೆ 5 ಲಕ್ಷ ರೂಪಾಯಿ ನೀಡುವಂತೆ ಶಂಕರ್ ಬಳಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಬಡ ಕುಟುಂಬದ ಯುವಕನಿಗೆ ಅಷ್ಟೊಂದು ದೊಡ್ಡ ಮೊತ್ತದ ಹಣ ನೀಡಲು ಸಾಧ್ಯವಾಗದೇ, ಇದ್ದ ಕೆಲಸವೂ ಕೈತಪ್ಪಿ ಹೋಗುತ್ತದೆ ಎಂಬ ತೀವ್ರ ಆತಂಕ ಹಾಗೂ ಅನ್ಯಾಯಕ್ಕೆ ನೊಂದು ಯುವಕ ಈ ಘೋರ ನಿರ್ಧಾರ ಕೈಗೊಂಡಿದ್ದಾನೆ.
ಶಂಕರ್ ಸಾವಿನ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಸಂಬಂಧಿಕರು, ಸ್ನೇಹಿತರು ಹಾಗೂ ಮುತ್ತ್ಯಾನಟ್ಟಿ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಕಂಪನಿ ಮುಂಭಾಗ ಜಮಾಯಿಸಿದರು. ಕಂಪನಿ ಮ್ಯಾನೇಜ್ಮೆಂಟ್ ಹಾಗೂ ಗುತ್ತಿಗೆದಾರನ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ಹಿಂಡಾಲ್ಕೋ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಆಸ್ತಿಪಾಸ್ತಿ ಹಾನಿ ಮಾಡಿದರು.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹಾಗೂ ಸ್ಥಳೀಯ ಶಾಸಕ ಆಸೀಫ್ ಸೇಠ್ ಭೇಟಿ ನೀಡಿ ಬಿಗುವಿನ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದರು.
ಈ ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು ಮುತ್ಯಾನಟ್ಟಿ ಗ್ರಾಮ ನಮ್ಮದು. ಇಲ್ಲಿನ ಕಷ್ಟ ಸುಖಕ್ಕಾಗಿ ನಾವು ಸದಾ ಬೆಂಬಲಿಕ್ಕಿದ್ದೇವೆ. ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಂಪನಿಯವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಇನ್ನು ವಾಲ್ಮೀಕಿ ಸಮಾಜದ ಮುಖಂಡ ಮಹೇಶ ಶೀಗಿಹಳ್ಳಿ ಅವರು ಬೆಳಗಾವಿಯ ಮುತ್ಯಾನಟ್ಟಿ, ಕಾಕತಿ, ಬಸನಕೊಳ್ಳ, ಕಣಬರ್ಗಿಯ ಕೇಂದ್ರ ಬಿಂದುವಾದ ಹಿಂಡಾಲ್ ಫ್ಯಾಕ್ಟರಿಯಲ್ಲಿ ಕಳೆದ ಹಲವು ವರ್ಷಗಳಿಂದ ಹಲವಾರು ಸಮಸ್ಯೆಗಳಿವೆ. ಫ್ಯಾಕ್ಟರಿ ನಿರ್ಮಾಣಕ್ಕೆ ಈ ಭಾಗದ ಜನರು ಭೂಮಿಯನ್ನು ನೀಡಿದ್ದು, ಅವರ ಕುಟುಂಬದಲ್ಲೊಬ್ಬರಿಗೆ ಫ್ಯಾಕ್ಟರಿಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ನೀಡಲಾಗಿತ್ತು. ಆದರೇ, ಈಗ ದಿನಗಳೆದಂತೆ ಈ ಆಶ್ವಾಸನೆ ಹುಸಿಯಾಗುತ್ತಿದೆ. ಫ್ಯಾಕ್ಟರಿಯಲ್ಲಿ ನೌಕರಿ ಪಡೆಯಲು ಎಸ್ಸೆಸ್ಸೆಲ್ಸಿ ಮತ್ತು ಐಟಿಐ ವಿದ್ಯಾರ್ಹತೆ ಬೇಕಾಗುತ್ತಿತ್ತು. ಆದರೇ ಈಗ ಡಿಪ್ಲೋಮಾ ಮೇಲೆ ಹೊರ ರಾಜ್ಯದವರಿಗೆ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಶಂಕರ ಎಂಬ ಯುವಕ ಇಲ್ಲಿ ಉದ್ಯೋಗ ಪಡೆಯಲು ಹಲವಾರು ವರ್ಷಗಳಿಂದ ಕಾಯುತ್ತಿದ್ದ, ಅಲ್ಲದೇ 5 ಲಕ್ಷ ರೂಪಾಯಿ ಹಣ ಕೂಡ ನೀಡಿದ್ದ. ಆದರೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ಯುವಕನ ಮನೆಯವರಿಗೆ ನೌಕರಿಯೊಂದಿಗೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ನೊಂದ ಕುಟುಂಬಸ್ಥರ ಮನವೊಲಿಸುವ ಯತ್ನಗಳು ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ನೂರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಘಟನೆ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
