ಬೆಳಗಾವಿ ನಗರದಲ್ಲಿ ಮುಂಗಾರು ಮಳೆ ವಿಳಂಬದಿಂದಾಗಿ ಈಗಾಗಲೇ ತೀವ್ರ ನೀರಿನ ತತ್ವಾರ ಸೃಷ್ಟಿಯಾಗಿದೆ. ಇದರ ನಡುವೆ ಖಾಸಭಾಗ ಸಂಭಾಜೀ ರಸ್ತೆಯ ಉಪ್ಪಾರ ಗಲ್ಲಿಯ ಕಾರ್ನರ್’ನಲ್ಲಿ ಅಭಿವೃದ್ಧಿ ಕಾಮಗಾರಿಗಳ ವೇಳೆ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್ ಒಡೆದು ಹೋಗಿದ್ದು, ನೂರಾರು ಲೀಟರ್ ನೀರು ಪೋಲಾಗುತ್ತಿದೆ.
ಬೆಳಗಾವಿ ನಗರಕ್ಕೆ ಸದ್ಯ ಸುಮಾರು 10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಜನತೆ ಒಂದು ಬಿಂದಿಗೆ ನೀರಿಗೂ ಪರದಾಡುವಂತಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಖಾಸಬಾಗ್ ವ್ಯಾಪ್ತಿಯ ಸಂಭಾಜಿ ರಸ್ತೆಯ ಉಪ್ಪಾರ ಗಲ್ಲಿಯ ಕಾರ್ನರ್ ಬಳಿ ಅಭಿವೃದ್ಧಿ ಕೆಲಸದ ವೇಳೆ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್‌ಗೆ ಭಾರಿ ಧಕ್ಕೆಯುಂಟಾಗಿದೆ. ಪರಿಣಾಮ ಕಳೆದ ಕೆಲವು ದಿನಗಳಿಂದ ಅಮೂಲ್ಯವಾದ ನೀರು ನಿರಂತರವಾಗಿ ರಸ್ತೆ ಪಾಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ನಗರದಲ್ಲಿ ನೀರಿನ ಅಭಾವ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಪೈಪ್‌ಲೈನ್ ಸರಿಪಡಿಸಬೇಕೆಂದು ಸಾರ್ವಜನಿಕರು ತೀವ್ರ ಒತ್ತಾಯ ಹತ್ತಿಕ್ಕಿದ್ದಾರೆ.

