ವಿಶ್ವದಾದ್ಯಂತ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಇದೇ ಸಂದರ್ಭದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ನಗರದ ಶ್ರೀ ಸತ್ಯ ಪ್ರಭೋದ ಮಂಗಲ ಕಾರ್ಯಾಲಯದಲ್ಲಿ ಪತಂಜಲಿ ಯೋಗ ಪೀಠದ ವತಿಯಿಂದ ಅತ್ಯಂತ ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ಯೋಗ ದಿನಾಚರಣೆಯನ್ನು ಆಚರಿಸಲಾಗಿದ್ದು, ನೂರಾರು ಸಾಧಕರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಅರುಣ್ ಪುಣೆಕರ್ ಹಾಗೂ ಸುರೇಖಾ ಪುಣೆಕರ್ ಸುಪರ್ದಿಯಲ್ಲಿ ಕಳೆದ 17 ವರ್ಷಗಳಿಂದ ಉಚಿತವಾಗಿ ನಡೆಯುತ್ತಿರುವ ನಾಲ್ಕು ನಿಯಮಿತ ಯೋಗ ಕಕ್ಷೆಗಳ ಸಂಯೋಗದಲ್ಲಿ ಈ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಬ್ಯಾಂಕ್ ಎ.ಜಿ.ಎಂ ಚಿದಂಬರ್ ಮುನವಳ್ಳಿ ಹಾಗೂ ಪತಂಜಲಿ ಯೋಗ ಪೀಠದ ರಾಜ್ಯ ಪ್ರಭರಿ ಕಿರಣ ಮಂಡೂಲ್ಕರ್ ಅವರು ಯೋಗದ ಪ್ರಯೋಜನಗಳ ಕುರಿತು ಮಾರ್ಗದರ್ಶನ ನೀಡಿದರು. ಹಿರಿಯ ಯೋಗ ಶಿಕ್ಷಕಿ ಶಿಲ್ಪಾ ಕುಲಕರ್ಣಿ ನಿರೂಪಿಸಿದ ಕಾರ್ಯಕ್ರಮದಲ್ಲಿ, ಹಿರಿಯ ಶಿಕ್ಷಕ ಆನಂದ ಅರಳಿ ಕಟ್ಟಿ ವಿಶಿಷ್ಟ ಆಸನಗಳನ್ನು ಬೋಧಿಸಿದರು. ಸುರೇಖಾ ಪುಣೆಕರ್ ಅವರು ಯೋಗ ಚಟುವಟಿಕೆಗಳ ವಿವರ ನೀಡಿದರೆ, ಪುಣೆಕರ್ ದಂಪತಿಗಳು ಸಾಧಕರೊಂದಿಗೆ ಸೇರಿ ಪ್ರಾಣಾಯಾಮ ಹಾಗೂ ಸೂಕ್ಷ್ಮ ವ್ಯಾಯಾಮಗಳನ್ನು ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಹತ್ತಾರು ವರ್ಷಗಳಿಂದ ಯೋಗ ಕಕ್ಷೆಗಳಲ್ಲಿ ಪಾಲ್ಗೊಳ್ಳುತ್ತಿರುವ ಹಿರಿಯ ಸಾಧಕರು ತಮಗೆ ಪ್ರಿಯವಾದ ಕಠಿಣ ಆಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಇಡೀ ಕಾರ್ಯಕ್ರಮದ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವಲ್ಲಿ ಸುರೇಶ್ ಕಲ್ಯಾಣಶೆಟ್ಟಿ ದಂಪತಿಗಳ ಸಹಕಾರ ಅತ್ಯಮೂಲ್ಯವಾಗಿತ್ತು. ಕೊನೆಯಲ್ಲಿ ಆನಂದ ಅರಳಿ ಕಟ್ಟಿ ಅವರ ವಂದನಾರ್ಪಣೆ, ಸಾಮೂಹಿಕ ಗ್ರೂಪ್ ಫೋಟೋ ಹಾಗೂ ಅಲ್ಪೋಪಹಾರ ಸೇವನೆಯೊಂದಿಗೆ ರಾಣಿ ಚೆನ್ನಮ್ಮ ನಗರದ ಈ ಯೋಗ ದಿನಾಚರಣೆ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಾರ್ವಜನಿಕರ ಆರೋಗ್ಯ ವೃದ್ಧಿಗೆ ಪೂರಕವಾದ ಈ ನಿರಂತರ ಯೋಗ ಕಾಯಕಕ್ಕೆ ಮಾಧ್ಯಮಗಳು ಪ್ರೋತ್ಸಾಹ ನೀಡುವಂತೆ ಆಯೋಜಕರು ಕೋರಿದ್ದಾರೆ.

