hubbali

ಸಂಘಟನೆ ಹೆಸರಿನಲ್ಲಿ ಯುವಕನ ಕಿಡ್ನ್ಯಾಪ್ ಮಾಡಿ ಹಲ್ಲೆ ಆರೋಪ

Share

ಸಂಘಟನೆಯ ಹೆಸರನ್ನು ಮುಂದಿಟ್ಟುಕೊಂಡು ಯುವಕ ಹಾಗೂ ಯುವತಿಯನ್ನು ಡಾಬಾದಿಂದ ಹೊರಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ ಗಂಭೀರ ಆರೋಪದ ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಜೂನ್ 19ರಂದು ಮಧ್ಯಾಹ್ನ ಹುಬ್ಬಳ್ಳಿ ಹೊರವಲಯದ ರಾಸ್ತಾ 63 ಹೋಟೆಲ್‌ಗೆ ಊಟಕ್ಕೆ ತೆರಳಿದ್ದ ಶರ್ವಿನ್ (22) ಹಾಗೂ ಓರ್ವ ಯುವತಿಯನ್ನು ನಾಲೈದು ಯುವಕರು ಪ್ರಶ್ನಿಸಿ, ಬಳಿಕ ಹೊರಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರಂಭದಲ್ಲಿ ಡಾಬಾ ಸಮೀಪ ಹಲ್ಲೆ ನಡೆಸಿದ ಆರೋಪಿಗಳು ನಂತರ ಇಬ್ಬರನ್ನೂ ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಯುವಕನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಮೂರರಿಂದ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಥಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಅವಧಿಯಲ್ಲಿ ಯಾರ ಸಂಪರ್ಕಕ್ಕೂ ಅವಕಾಶ ನೀಡದೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದಷ್ಟೇ ಅಲ್ಲದೆ, ಹಣಕ್ಕೂ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಹಲ್ಲೆಯ ಬಳಿಕ ಯುವಕನನ್ನು ಆಟೋದಲ್ಲಿ ಕಳುಹಿಸಿದ್ದು, ಬಳಿಕ ಶರ್ವಿನ್ ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಳಿ ಪಾಲಕರನ್ನು ಭೇಟಿ ಮಾಡಿದ ವೇಳೆ ಆರೋಪಿಗಳು ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ. ಆರೋಪಿಗಳ ಚಲನವಲನದ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹಲ್ಲೆಯಿಂದ ಯುವಕನಿಗೆ ದೇಹದಾದ್ಯಂತ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ಪಡೆದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿಎಸ್ಪಿ ವಿನೋದ್ ಮುತ್ತೇದಾರ್ ಹಾಗೂ ಗ್ರಾಮೀಣ ಠಾಣೆಯ ಇನ್ಸೆಕ್ಟ‌ರ್ ಮುರುಗೇಶ್ ಚನ್ನಣ್ಣನವ‌ರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಪ್ರಕರಣ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ. ಪೊಲೀಸ್ ತನಿಖೆಯ ಬಳಿಕವೇ ಘಟನೆಯ ನಿಖರ ಹಿನ್ನೆಲೆ ಹಾಗೂ ಆರೋಪಗಳ ಸತ್ಯಾಸತ್ಯತೆ ಹೊರಬರಬೇಕಿದೆ.

Tags:

error: Content is protected !!