ಖಾನಾಪೂರ ತಾಲೂಕಿನ ನಂದಗಡದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪವಿತ್ರ ‘ಇಸ್ತಿಮಾ’ ಧಾರ್ಮಿಕ ಕೂಟವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇಸ್ಲಾಂ ಧರ್ಮಗುರುಗಳು ಹಾಗೂ ಹಿರಿಯರ ದಿವ್ಯ ಮಾರ್ಗದರ್ಶನದಲ್ಲಿ ಜರುಗಿದ ಈ ಮಹಾಕೂಟದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡು ಸಮಾಜಕ್ಕೆ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.


ನಂದಗಡದ ರಾಯಾಪೂರದಲ್ಲಿರುವ ಎನ್.ಆರ್.ಇ. ಸಂಸ್ಥೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಇಸ್ತಿಮಾ ಕೂಟದಲ್ಲಿ ಪಾಲ್ಗೊಂಡಿದ್ದ ಧರ್ಮಗುರುಗಳು, ಸಮಾಜದಲ್ಲಿ ಆದರ್ಶ ಜೀವನ ನಡೆಸುವುದು ಹೇಗೆ ಮತ್ತು ಮುಂದಿನ ಪೀಳಿಗೆಗೆ ಸೌಹಾರ್ದತೆಯ ಮೌಲ್ಯಗಳನ್ನು ಹೇಗೆ ದಾಟಿಸಬೇಕು ಎಂಬ ಕುರಿತು ವಿಶೇಷ ಉಪದೇಶ ನೀಡಿದರು. ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಸಮಾವೇಶದಲ್ಲಿ ಸಹಸ್ರಾರು ಭಕ್ತರು ಒಟ್ಟಾಗಿ ನಮಾಜ್ ಸಲ್ಲಿಸಿ, ಸಮಾಜದ ಕಲ್ಯಾಣಕ್ಕಾಗಿ ಮತ್ತು ವಿಶ್ವಶಾಂತಿಗಾಗಿ ಅಲ್ಲಾಹನಲ್ಲಿ ವಿಶೇಷ ದುವಾ (ಪ್ರಾರ್ಥನೆ) ಮಾಡಿದರು. ಸ್ವಯಂಸೇವಕರು ಮತ್ತು ವಿವಿಧ ವಿಭಾಗಗಳ ಜವಾಬ್ದಾರಿಯುತ ಮುಖಂಡರು ಹಗಲಿರುಳು ಶ್ರಮಿಸುವ ಮೂಲಕ ಈ ತಾಲ್ಲೂಕು ಮಟ್ಟದ ಇಸ್ತಿಮಾ ಕೂಟವನ್ನು ಅತ್ಯಂತ ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ನೆರವೇರಿಸಿದರು.
