ಖಾನಾಪುರ ತಾಲೂಕಿನ ಮನತುರ್ಗಾ ಗ್ರಾಮದ ಗಾವಠಾಣ ರಸ್ತೆಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಇದ್ದ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ರೈತರು ಮತ್ತು ಗ್ರಾಮಸ್ಥರ ಪರಸ್ಪರ ಒಪ್ಪಿಗೆ ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರ ಮಧ್ಯಸ್ಥಿಕೆಯಲ್ಲಿ, ತಹಶೀಲ್ದಾರ್ ದುಂಡಪ್ಪ ಕೋಮಾರ ಅವರ ಸಮ್ಮುಖದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ವಿವಾದಕ್ಕೆ ಯಶಸ್ವಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲಾಗಿದೆ.


ಮನತುರ್ಗಾ ಗ್ರಾಮದಲ್ಲಿ ಗಾವಠಾಣ ರಸ್ತೆ ನಿರ್ಮಾಣವಾಗಬೇಕೆಂಬುದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿತ್ತು. ಆದರೆ ಇದಕ್ಕೆ ರೈತರ ಕೆಲವು ತಕರಾರು ಹಾಗೂ ತೊಂದರೆಗಳಿದ್ದವು. ರಸ್ತೆಯೂ ಆಗಬೇಕು, ಇತ್ತ ರೈತರಿಗೂ ನಷ್ಟವಾಗಬಾರದು ಎಂಬ ನಿಲುವನ್ನು ಬ್ಲಾಕ್ ಕಾಂಗ್ರೆಸ್ ನಾಯಕರು ತಳೆದಿದ್ದರು. ಈ ನಿಟ್ಟಿನಲ್ಲಿ ಈ ಹಿಂದೆ ತಹಶೀಲ್ದಾರ್ ಅವರನ್ನು ಭೇಟಿಯಾಗಿ ವಸ್ತುಸ್ಥಿತಿಯನ್ನು ವಿವರಿಸಲಾಗಿತ್ತು ಹಾಗೂ ಸರ್ವೆ ಇಲಾಖೆಯೊಂದಿಗೂ ಚರ್ಚೆ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಖಾನಾಪುರ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರು ಸೋಮವಾರ ಸಂಬಂಧಪಟ್ಟ ಎಲ್ಲರಿಗೂ ನೋಟಿಸ್ ಜಾರಿ ಮಾಡಿ ಸಭೆ ಕರೆದಿದ್ದರು. ಸಭೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸುದೀರ್ಘ ಚರ್ಚೆ ನಡೆಸಲಾಯಿತು. ರೈತರ ಬೇಡಿಕೆಯಂತೆ ರಸ್ತೆಯನ್ನು ಜಮೀನಿನ ಮಧ್ಯಭಾಗದಲ್ಲಿ ಮಾಡದೇ, ಜಮೀನಿನ ಒಂದು ಬದಿಯಿಂದ ಮಾಡಲು ನಿರ್ಧರಿಸಲಾಯಿತು. ಇನ್ನು ಸಿಡಿ (ಮೋರಿ) ನಿರ್ಮಾಣದ ಕುರಿತಾದ ರೈತರ ದೂರಿಗೆ ತಕ್ಷಣವೇ ಸ್ಪಂದಿಸಿದ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಪಿಡಿಒ ಅವರೊಂದಿಗೆ ಚರ್ಚಿಸಿ, ಮುಂದಿನ ವರ್ಷದಲ್ಲಿ ಹೊಸ ಸಿಡಿ ಹಾಗೂ ಗ್ರಾಮದ ಕಡೆಯ ರಸ್ತೆಯನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ತದನಂತರ ಎಲ್ಲರ ಸಮ್ಮುಖದಲ್ಲಿ ಬಾಂಡ್ ಪೇಪರ್ ಮೇಲೆ ಸಹಿ ಪಡೆಯುವ ಮೂಲಕ ರಸ್ತೆ ನಿರ್ಮಾಣದ ಮಾರ್ಗವನ್ನು ಸುಗಮಗೊಳಿಸಲಾಯಿತು. ಈ ಪ್ರಮುಖ ಸಂಧಾನ ಸಭೆಯಲ್ಲಿ ಅಮೃತ್ ಶೇಲಾರ್, ಈಶ್ವರ್ ಬೋಬಾಟೆ, ಸುಭಾಷ್ ಪಾಟೀಲ್, ಜ್ಞಾನೇಶ್ವರ್ ಪಾಟೀಲ್, ಭುಜಂಗ್ ಪಾಟೀಲ್, ವಿಠ್ಠಲ್ ಉರ್ಫ್ ಬಾಳು ಪಾಟೀಲ್, ಕಾಂಗ್ರೆಸ್ನ ಸುರೇಶ್ ಭಾವು, ಮಾಜಿ ನಗರಸೇವಕ ತೋಹಿದ್, ಸಾಯಿಶ್ ಸುತಾರ್, ಭೂಷಣ್ ಪಾಟೀಲ್, ಅಭಿಷೇಕ್ ಶಹಾಪುರಕರ್, ಯಶವಂತ್ ದೇಸಾಯಿ ಕಾರಲಗಾ ಸೇರಿದಂತೆ ಮಣತುರ್ಗ ಗ್ರಾಮದ ಹಿರಿಯರು, ರೈತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿದಿದ್ದಕ್ಕೆ ಮಣತುರ್ಗ ಗ್ರಾಮದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
