Belagavi

ಬಸ್‌ಗಳಲ್ಲಿ ಕೃತಕ ರಶ್ ಸೃಷ್ಟಿಸಿ ಚಿನ್ನ ಲೂಟಿ ಮಾಡುತ್ತಿದ್ದ ಯುಪಿ ಮೂಲದ 11 ಖತರ್ನಾಕ್ ಕಳ್ಳರ ಬಂಧನ: ಎಸ್‌ಪಿ ಕೆ. ರಾಮರಾಜನ್

Share

1. ಬಸ್‌ಗಳಲ್ಲಿ ಕೃತಕ ರಶ್ ಸೃಷ್ಟಿಸಿ ಕಳ್ಳತನ
2. ಉತ್ತರ ಪ್ರದೇಶ ಮೂಲದ 11 ಖದೀಮರ ಬಂಧನ
3. ಕಾಗವಾಡ ಅಥಣಿ ಪೊಲೀಸರಿಂದ ಜಂಟಿ ಕಾರ್ಯಾಚರಣೆ
4. ಆರೋಪಿಗಳಿಂದ 225 ಗ್ರಾಂ ಚಿನ್ನ ವಶ

ರಾಜ್ಯದ ಬಸ್‌ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಸರಣಿ ಕಳ್ಳತನ ನಡೆಸುತ್ತಿದ್ದ ಉತ್ತರ ಪ್ರದೇಶ ಮೂಲದ ಅಂತರರಾಜ್ಯ ಕಳ್ಳರ ಗ್ಯಾಂಗ್ ಒಂದನ್ನು ಪೊಲೀಸರು ಜಾಲಿಯಾಡಿದ್ದಾರೆ. ಕೃತಕವಾಗಿ ರಶ್ ಸೃಷ್ಟಿಸಿ ಲೂಟಿ ಹೊಡೆಯುತ್ತಿದ್ದ 11 ಜನರನ್ನು ಖೆಡ್ಡಾಕ್ಕೆ ಕೆಡವಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಜನ್ ಅವರು ಮಾಧ್ಯಮಗೋಷ್ಟಿಯಲ್ಲಿ ಹಂಚಿಕೊಂಡಿದ್ದಾರೆ.
ಅಥಣಿ ಉಪಠಾಣಾ ವ್ಯಾಪ್ತಿಯ ಬಸ್‌ಗಳಲ್ಲಿ ಕೃತಕವಾಗಿ ರಶ್ ಸೃಷ್ಟಿಸಿ, “ನಿಮ್ಮ ಬ್ಯಾಗ್ ನಾವು ಜೋಪಾನವಾಗಿಡುತ್ತೇವೆ” ಎಂದು ನಂಬಿಸಿ ಸಾರ್ವಜನಿಕರ ಬ್ಯಾಗ್‌ಗಳನ್ನು ಪಡೆದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಜಾಲವನ್ನು ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ. ಸಿಸಿಟಿವ್ಹಿಯಲ್ಲಿ ಸಿಕ್ಕ ಪ್ರಮುಖ ಸುಳಿವು ಹಾಗೂ ಮಾಹಿತಿ ಆಧಾರದ ಮೇಲೆ ಕಾಗವಾಡ ಮತ್ತು ಅಥಣಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಉತ್ತರ ಪ್ರದೇಶ ಮೂಲದ 11 ಜನರ ಗ್ಯಾಂಗ್ ಅನ್ನು ಬಂಧಿಸಿದ್ದಾರೆ ಎಂದು ಎಸ್‌ಪಿ ಕೆ. ರಾಜನ್ ಅವರು ತಿಳಿಸಿದ್ದಾರೆ. ಈ ಗ್ಯಾಂಗ್‌ನಿಂದಾಗಿ ಕಾಗವಾಡದಲ್ಲಿ ನಾಲ್ಕು, ಚಿಕ್ಕೋಡಿಯಲ್ಲಿ ಒಂದು ಮತ್ತು ಅಥಣಿಯಲ್ಲಿ ಒಂದು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪೊಲೀಸರು ತೀವ್ರ ನಿಗಾ ವಹಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬೈಟ್
ಬಂಧಿತ ಕಳ್ಳರು ಬಸ್‌ಗಳಲ್ಲಿ ಪ್ರಯಾಣಿಸುವಾಗ ವಿಶೇಷವಾಗಿ ಬೆಲೆಬಾಳುವ ಉಡುಪು ಧರಿಸಿದವರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಕಾಗವಾಡ, ಅಥಣಿ ಮತ್ತು ಚಿಕ್ಕೋಡಿ ಭಾಗಗಳಲ್ಲಿ ಬ್ಯಾಗ್‌ಗಳಲ್ಲಿದ್ದ ಬಂಗಾರವನ್ನು ಲೂಟಿ ಮಾಡುತ್ತಿದ್ದ ಈ ಗ್ಯಾಂಗ್‌ನಿಂದ ಸದ್ಯಕ್ಕೆ ಒಟ್ಟು 225 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಹುಪಾಲು ಚಿನ್ನವನ್ನು ರಿಕವರಿ ಮಾಡಲಾಗಿದೆ. ಇಂತಹ ಕೃತ್ಯಗಳಿಗೆ ಬ್ರೇಕ್ ಹಾಕಲು ಮುಂದಿನ ದಿನಗಳಲ್ಲಿ ಬಸ್ಸುಗಳಲ್ಲಿ ಸಿಸಿಟಿವಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿ ಸಾರ್ವಜನಿಕರ ರಕ್ಷಣೆಗೆ ಹದ್ದಿನಕಣ್ಣಿಡಲಿದ್ದಾರೆ ಎಂದು ಅವರು ಭರವಸೆ ನೀಡಿದ್ದಾರೆ. ಇದೇ ವೇಳೆ ಸಾರ್ವಜನಿಕರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಬಸ್ ಪ್ರಯಾಣದ ಸಮಯದಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ತಮ್ಮ ಬ್ಯಾಗ್ ಮತ್ತು ಒಡವೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ವಿನಂತಿಸಿದ್ದಾರೆ.

Tags:

error: Content is protected !!