Belagavi

ಪ್ರೀತಿ, ವಾತ್ಸಲ್ಯ ಹಾಗು ಸೇವಾ ಮನೋಭಾವದಿಂದ ಕೂಡಿದ ಆದರ್ಶಮಯ ಬದುಕು ನಮ್ಮದಾಗಲಿ : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

Share

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಸಮಾಜಕ್ಕೆ ಸಹಾಯ ಮಾಡುವ ಸೇವಾ ಗುಣ ನಮ್ಮಲ್ಲಿರಬೇಕು. ಇದು ಮಾನವೀಯತೆಯ ಅತ್ಯುನ್ನತ ಮೌಲ್ಯವಾಗಿದೆ. ಸೇವಾ ಮನೋಭಾವ ನಮ್ಮಲ್ಲಿ ಸಹಾನುಭೂತಿ, ಕರುಣೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಪ್ರೀತಿ, ವಾತ್ಸಲ್ಯ ಹಾಗು ಸೇವಾಮನೋಭಾವದಿಂದ ಕೂಡಿದ ಆದರ್ಶಮಯ ಬದುಕು ನಮ್ಮದಾಗಬೇಕು
ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಭಾನುವಾರ ಇಲ್ಲಿನ‌ ಶಿವಬಸವ ನಗರದ ಎಸ್. ಜಿ. ಸಂಬರಗಿಮಠ ಸಭಾಭವನದಲ್ಲಿ ಲಿಂಗೈಕ್ಯ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣಾರ್ಥ ಹಮ್ಮಿಕೊಂಡ ಮಹಿಳಾರತ್ನ ಹಾಗೂ ಆದರ್ಶ ದಂಪತಿ ಪ್ರಶಸ್ತಿ ಪ್ರಧಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಶ್ರೀಗಳು 65 ವರ್ಷಗಳ ಹಿಂದೆ ಲಿಂಗೈಕ್ಯರಾದ ಪದ್ಮಾವತಿ ಷಣ್ಮುಖಪ್ಪ ಅಂಗಡಿಯವರು ಅಪಾರ ಪ್ರತಿಭೆಯುಳ್ಳವರಾಗಿದ್ದು, ಕೇವಲ 6ನೇ ತರಗತಿವರೆಗೆ ಓದಿದ್ದ ಅವರು ಸಾಮಾಜಿಕ ಕಳಕಳಿ ಉಳ್ಳವರಾಗಿದ್ದರು. ಬಡವರಿಗೆ ಸಹಾಯ ಮಾಡುವುದು, ಸಮಾಜ ಸೇವೆ, ಸಾಹಿತ್ಯ ಸೇವೆಯನ್ನೇ ತಮ್ಮ ಜೀವನದ ಗುರಿಯಾಗಿಸಿಕೊಂಡಿದ್ದರು.ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯರಾಗಿ, ಬೆಳಗಾವಿ ಪರಿಸರದಲ್ಲಿ ಕನ್ನಡ ಶಾಲೆಗಳ ಸ್ಥಾಪನೆಗಾಗಿ ಇವರು ಕೈಗೊಂಡ ಕಾರ್ಯ ಚಿರಸ್ಮರಣೀಯ ಎಂದರು.

ಮಹಿಳಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೇಗಿನಹಾಳದ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ರೋಹಿಣಿ ಪಾಟೀಲ ತನ್ನೆಲ್ಲಾ ಸಾಧನೆಗೆ ಪತಿ ಬಾಬಾಸಾಹೇಬ ಪಾಟೀಲರ ಸಂಪೂರ್ಣ ಬೆಂಬಲ ಮತ್ತು ಸಹಕಾರ ಅಲ್ಲದೆ ಕ್ಷೇತ್ರದ ಜನರ ಪ್ರೀತಿ, ಬೆಂಬಲ ಮತ್ತು ವಿಶ್ವಾಸವೇ ಕಾರಣ ಎಂದರು.

ದೇವರಾಜ್ ಅರಸು ಕಾಲೋನಿಯಲ್ಲಿನ ರುದ್ರಾಕ್ಷಿ ಮಠದ ವೃದ್ಧಾಶ್ರಮದ ಸಂಯೋಜಕ ಎಂ. ಎಸ್. ಚೌಗಲಾ ಮಾತನಾಡಿ ಗ್ರಾಮೀಣ ಭಾಗದ ಅತ್ಯಂತ ಕಡುಬಡತನದ ಕುಟುಂಬದಿಂದ ಬಂದಿದ್ದ ನನ್ನನ್ನು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳು ಗುರುತಿಸಿ ಶಿಕ್ಷಕ, ಸಂಯೋಜಕ, ಪ್ರಾಚಾರ್ಯ ಸೇರಿದಂತೆ ಅನೇಕ ಹುದ್ದೆಗಳನ್ನು ನೀಡಿ ಸಮಾಜ ಗುರುತಿಸುವಂತೆ ಮಾಡಿದರು. ಅವರ ಆಶೀರ್ವಾದವೇ ನಮ್ಮ ಸಾಧನೆಗೆ ಸ್ಫೂರ್ತಿ ಎಂದರು.

ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ನೇಗಿನಹಾಳದ ರೋಹಿಣಿ ಬಾಬಾಸಾಹೇಬ ಪಾಟೀಲ ಅವರಿಗೆ “ಮಹಿಳಾ ರತ್ನ” ಮತ್ತು ಬೆಳಗಾವಿ ಮಹಿಳಾ ಕಲ್ಯಾಣ ಸಂಸ್ಥೆಯ ಶ್ರೀ ಎಂ.ಎಸ್. ಚೌಗುಲಾ ಮತ್ತು ವೈಜಯಂತಿ ಚೌಗುಲಾ ಅವರಿಗೆ “ಆದರ್ಶ ದಂಪತಿ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿದ್ದರು. ವೇದಿಕೆ ಮೇಲೆ ನಗರದ ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹಣಮಂತ ಕೊಂಗಾಳಿ, ಸಾಹಿತಿ ಪ್ರೇಮಕಕ್ಕ ಅಂಗಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ವಿಶೇಷ ಸಾಧನೆ ಮಾಡಿದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯವಿದ್ಯಾರ್ಥಿನಿಯರಾದ ಸಂಜನಾ ನಡುವಿನಮನಿ, ನಿಹಾರಿಕಾ ಈಟಿ, ಪ್ರತೀಕ್ಷಾ ಪೂಜಾರಿ, ಚೈತನ್ಯ ಕೇದಾರ, ಶ್ರೇಯಾ ಅಮಾತೆ, ಅಂಜನಾ ಜಾಯಿ ಮತ್ತು ರಾಧಿಕಾ ಲಮಾಣಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಾರಂಭದಲ್ಲಿ ಎಸ್‌.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಧ್ಯಾಪಕಿ ಡಾ. ಅನಿತಾ ಪಾಟೀಲ ಸ್ವಾಗತಿಸಿದರು. ಕೊನೆಗೆ ವಿಜ್ಞಾನ ಕೇಂದ್ರದ ರಾಜಶೇಖರ ಪಾಟೀಲ ನಿರೂಪಿಸಿ ವಂದಿಸಿದರು.

Tags:

error: Content is protected !!