Chikkodi

ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು; ಆರೋಪಿ ಪೊಲೀಸ್ ವಶಕ್ಕೆ!

Share

ಶಾಲೆಯ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷಕನಿಗೆ ಪೋಷಕರು ಶಾಲೆಯೊಳಗೆ ನುಗ್ಗಿ ಧರ್ಮದೇಟು ನೀಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉರ್ದು ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಶ್ರೀಶೈಲ ಕುಂಬಾರ ಎಂಬಾತನೇ ಸಾರ್ವಜನಿಕರಿಂದ ಗೂಸಾ ತಿಂದ ಶಿಕ್ಷಕ.ಆರೋಪಿ ಶಿಕ್ಷಕ ಶ್ರೀಶೈಲ ಕುಂಬಾರ ಕಳೆದ ಕೆಲವು ದಿನಗಳಿಂದ 10ನೇ ತರಗತಿಯ ಗಂಡು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. 10ನೇ ತರಗತಿಯ ಕನ್ನಡ ವಿಷಯದಲ್ಲಿ ಪಾಸ್ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಆಮಿಷ ಒಡ್ಡುತ್ತಿದ್ದ ಈತ, ಶಾಲೆಯ ಕೊಠಡಿ ಹಾಗೂ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ವಿಕೃತ ಚೇಷ್ಟೆ ನಡೆಸುತ್ತಿದ್ದ ಎನ್ನಲಾಗಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಐದಕ್ಕೂ ಹೆಚ್ಚು ವಿದ್ಯಾರ್ಥಿಗಳು ಈತನ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ವಿದ್ಯಾರ್ಥಿಗಳ ಪೋಷಕರು ಮತ್ತು ಸಾರ್ವಜನಿಕರು ಶಾಲೆಯ ಆವರಣಕ್ಕೆ ನುಗ್ಗಿದ್ದಾರೆ. ಕಾಮುಕ ಶಿಕ್ಷಕ ಶ್ರೀಶೈಲ ಕುಂಬಾರನಿಗೆ ಹಿಗ್ಗಾಮುಗ್ಗಾ ತಳಿಸಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದರಿಂದಾಗಿ ಶಾಲಾ ಆವರಣದಲ್ಲಿ ಕೆಲಕಾಲ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಶಾಲೆಯಲ್ಲಿ ಗಲಾಟೆ ನಡೆದು ಸಾರ್ವಜನಿಕರು ಶಿಕ್ಷಕನಿಗೆ ಧರ್ಮದೇಟು ನೀಡುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕೋಡಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಪೊಲೀಸರು, ಆರೋಪಿ ಶಿಕ್ಷಕ ಶ್ರೀಶೈಲ ಕುಂಬಾರನನ್ನು ಸಾರ್ವಜನಿಕರ ಕೈಯಿಂದ ಬಿಡಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಜ್ಞಾನ ದೇಗುಲವಾಗಬೇಕಿದ್ದ ಶಾಲೆಯಲ್ಲೇ ಶಿಕ್ಷಕನೊಬ್ಬ ಇಂತಹ ನೀಚ ಕೃತ್ಯಕ್ಕೆ ಇಳಿದಿರುವುದು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Tags:

error: Content is protected !!