Belagavi

ನಿಮ್ಮ ತಲೆಗೆ ರಿಪ್ಲೇಸ್‌ಮೆಂಟ್ ಇಲ್ಲ: ಹೆಲ್ಮೆಟ್ ಧರಿಸಲು ಡಿಸಿಪಿ ನಾರಾಯಣ ಭರಮನಿ ಖಡಕ್ ಕರೆ! ಬೆಳಗಾವಿ ಪೀರನವಾಡಿ ನಾಕಾದಲ್ಲಿ ಹೆಲ್ಮೆಟ್ ಜಾಗೃತಿ

Share

ಹೆಲ್ಮೆಟ್ ಧರಿಸುವುದು ಕೇವಲ ಪೊಲೀಸರಿಗಲ್ಲ, ಅದು ನಿಮ್ಮ ಜೀವದ ರಕ್ಷಣೆಗಾಗಿ. ಬೆಳಗಾವಿ ನಗರದ ಪೀರನವಾಡಿ ನಾಕಾದಲ್ಲಿ ಖುದ್ದು ಡಿಸಿಪಿ ನಾರಾಯಣ ಭರಮನಿ ಅವರೇ ರಸ್ತೆಗಿಳಿದು ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಬೆಳಗಾವಿ ನಗರದ ಪೀರನವಾಡಿ ನಾಕಾದಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ನಾರಾಯಣ ಭರಮನಿ ಅವರ ನೇತೃತ್ವದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ನಿಯಮಗಳ ಪಾಲನೆ ಹಾಗೂ ಕಡ್ಡಾಯ ಹೆಲ್ಮೆಟ್ ಧರಿಸುವ ಕುರಿತು ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಾಯಿತು. ಸ್ವತಃ ರಸ್ತೆಗಿಳಿದು ವಾಹನಗಳನ್ನು ತಡೆದು ಮಾತನಾಡಿಸಿದ ಡಿಸಿಪಿ ಅವರು, ನಿಯಮ ಉಲ್ಲಂಘಿಸುವ ಸವಾರರಿಗೆ ದಂಡ ವಿಧಿಸುವ ಮುನ್ನ ಪ್ರೀತಿಯಿಂದಲೇ ತಿಳಿಹೇಳಿ ಜಾಗೃತಿ ಮೂಡಿಸುವ ವಿಶಿಷ್ಟ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದು, ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.

ಕಾರ್ಯಾಚರಣೆ ವೇಳೆ ಮಾತನಾಡಿದ ಡಿಸಿಪಿ ಅವರು, “ಕೈ ಅಥವಾ ಕಾಲು ಮುರಿದರೆ ಡಾಕ್ಟರ್‌ಗಳು ಸರಿಪಡಿಸಬಹುದು, ಆದರೆ ತಲೆಗೆ ಪೆಟ್ಟಾದರೆ ಯಾವುದೇ ರಿಪ್ಲೇಸ್‌ಮೆಂಟ್ ಇರುವುದಿಲ್ಲ” ಎಂದು ಸವಾರರಿಗೆ ಕಟು ಸತ್ಯವನ್ನು ನೆನಪಿಸಿದರು. ವಾಹನ ಹತ್ತುವ ಮುನ್ನ ಪ್ರತಿಯೊಬ್ಬ ಸವಾರನು ತನ್ನ ಕುಟುಂಬದ ಜವಾಬ್ದಾರಿಯನ್ನು ನೆನಪಿಸಿಕೊಳ್ಳಬೇಕು. ನಿಮ್ಮ ಹೆಂಡತಿ, ಮಕ್ಕಳು, ತಂದೆ-ತಾಯಿ ನಿಮಗಾಗಿ ಕಾಯುತ್ತಿರುತ್ತಾರೆ. ಕೇವಲ 500 ರಿಂದ 600 ರೂಪಾಯಿಗಳ ಹೆಲ್ಮೆಟ್ ನಿಮ್ಮ ಇಡೀ ಕುಟುಂಬಕ್ಕೆ ಸುರಕ್ಷತೆಯನ್ನು ನೀಡುತ್ತದೆ. ಪೊಲೀಸರನ್ನು ನೋಡಿ ಹೆಲ್ಮೆಟ್ ಹಾಕಿಕೊಳ್ಳುವುದನ್ನು ಬಿಟ್ಟು, ಸ್ವಂತ ಜೀವದ ರಕ್ಷಣೆಗಾಗಿ ಮತ್ತು ನಿಮ್ಮ ಕುಟುಂಬದ ನೆಮ್ಮದಿಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಅವರು ಸವಾರರಲ್ಲಿ ಅತ್ಯಂತ ಕಾಳಜಿಯಿಂದ ಮನವಿ ಮಾಡಿಕೊಂಡರು.

Tags:

error: Content is protected !!