ಬೆಳಗಾವಿ ನಗರದ ಭೋಯಿ ಗಲ್ಲಿ, ಭಾತಕಾಂಡೆ ಗಲ್ಲಿ ಹಾಗೂ ಭೆಂಢೀಬಝಾರ್ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಸ್ಥಳೀಯ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಕಳೆದ ಎರಡು ತಿಂಗಳಿನಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಮುಂಬರುವ ಮಳೆಗಾಲದ ಭೀತಿಯ ನಡುವೆಯೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿ ಕೆಲಸಗಳು ಅರ್ಧಂಬರ್ಧ ನನೆಗುದಿಗೆ ಬಿದ್ದಿದ್ದು, ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿದೆ.
ಬೆಳಗಾವಿಯ ಭೋಯಿ ಗಲ್ಲಿ, ಭಾತಕಾಂಡೆ ಗಲ್ಲಿ, ಭೆಂಢೀಬಝಾರ್ ಮತ್ತು ಇವುಗಳಿಗೆ ಸಂಪರ್ಕ ಕಲ್ಪಿಸುವ ಮೂರು ಪ್ರಮುಖ ರಸ್ತೆಗಳನ್ನು ಒಂದೇ ಬಾರಿಗೆ ಬಂದ್ ಮಾಡಿ ಕಾಮಗಾರಿ ಆರಂಭಿಸಿರುವುದರಿಂದ ಇಡೀ ಭಾಗದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಕಳೆದ 2 ತಿಂಗಳಿನಿಂದ ಜನರು ಮೂಲಭೂತ ಸೌಕರ್ಯಗಳಿಲ್ಲದೇ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸದ್ಯ ಎಲ್ಲಾ ಕಾಮಗಾರಿಗಳನ್ನು ಅರ್ಧಂಬರ್ಧ ಮಾಡಿ ಕೈಬಿಡಲಾಗಿದ್ದು, ಮುಂಬರುವ ದಿನಗಳಲ್ಲಿ ಮಳೆಗಾಲ ಆರಂಭವಾದರೆ ಪರಿಸ್ಥಿತಿ ಇನ್ನಷ್ಟು ಕೈ ಮೀರಿ ಹೋಗಲಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ತುರ್ತು ಪರಿಸ್ಥಿತಿ ಎದುರಾದರೆ ವೃದ್ಧರು, ರೋಗಿಗಳು ಹಾಗೂ ಸಾರ್ವಜನಿಕರು ಓಡಾಡಲು ದಾರಿಯಿಲ್ಲದೇ ಪರದಾಡುವಂತಾಗಿದ್ದು, ಜಿಲ್ಲಾಡಳಿತವು ಮುಂಬರುವ ದಿನಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕೆಂದು ಸ್ಥಳೀಯರು ತೀವ್ರವಾಗಿ ಆಗ್ರಹಿಸಿದ್ದಾರೆ.
ಇಲ್ಲಿನ ರಸ್ತೆ ಕಾಮಗಾರಿಯನ್ನು ಅತ್ಯಂತ ಅವೈಜ್ಞಾನಿಕವಾಗಿ ಕೈಗೆತ್ತಿಕೊಳ್ಳಲಾಗಿದ್ದು, ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡದೆ ಮೂರು ಸಂಪರ್ಕ ರಸ್ತೆಗಳನ್ನು ಒಂದೇ ಬಾರಿ ಅಗಿಯಲಾಗಿದೆ. ಇದರಿಂದಾಗಿ ಅನಾರೋಗ್ಯ ಪೀಡಿತರಿಗಾಗಿ ಮನೆ ಬಾಗಿಲಿಗೆ ಆಂಬುಲೆನ್ಸ್ ಕೂಡ ಬರಲಾರದಷ್ಟು ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರರಲ್ಲಿ ಕನಿಷ್ಠ ಒಂದು ರಸ್ತೆಯನ್ನಾದರೂ ಮೊದಲು ಪೂರ್ಣಗೊಳಿಸಿ, ನಂತರ ಇನ್ನುಳಿದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಸಾಮಾನ್ಯ ಜ್ಞಾನವನ್ನೂ ಅಧಿಕಾರಿಗಳು ಪ್ರದರ್ಶಿಸಿಲ್ಲ.
ಇದರ ಜೊತೆಗೆ, ರಸ್ತೆ ಅಗೆದ ಕಸ ಹಾಗೂ ಮಣ್ಣನ್ನು ಶೇಖರಿಸಿ ಸ್ಥಳದಲ್ಲೇ ಬಿಟ್ಟು ಹೋಗಿರುವುದರಿಂದ ಇಡೀ ವಾತಾವರಣ ಕಲುಷಿತಗೊಂಡಿದೆ. ಇನ್ನು ಪ್ರಮುಖ ಮಾರುಕಟ್ಟೆ ಪ್ರದೇಶವಾಗಿರುವ ಇಲ್ಲಿನ ವ್ಯಾಪಾರಿಗಳು ಕಳೆದ 8 ದಿನಗಳಿಂದ ಗ್ರಾಹಕರಿಲ್ಲದೇ, ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ.
ಮಾರುಕಟ್ಟೆಯ ಹೃದಯಭಾಗದಂತಿರುವ ಬೆಂಡೀಬಝಾರ್, ಕಸಾಯಿ ಗಲ್ಲಿ, ಭೋಯಿ ಗಲ್ಲಿ ಮತ್ತು ಭಾತಕಾಂಡೆ ಗಲ್ಲಿಯ ಪ್ರಮುಖ ರಸ್ತೆಗಳು ಸಂಪೂರ್ಣ ಬಂದ್ ಆಗಿರುವುದರಿಂದ ಗ್ರಾಹಕರು ಈ ಭಾಗಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಕಾಮಗಾರಿಯನ್ನೇನೋ ಕೈಗೆತ್ತಿಕೊಳ್ಳಲಾಗಿದೆ, ಆದರೆ ನಾಲ್ಕೂ ಕಡೆಗಳಲ್ಲಿ ಕೆಲಸಗಳು ಮಾತ್ರ ಆಮೆಗತಿಯಲ್ಲಿ ಸಾಗುತ್ತಿವೆ ಎಂದು ನಾಗರಿಕರು ದೂರಿದ್ದಾರೆ. ಮಳೆಗಾಲದ ಜಲಾವೃತ ಭೀತಿಯಿಂದ ಪಾರಾಗಲು ಮತ್ತು ಮಾರುಕಟ್ಟೆಯ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳಲು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆಯು ತಕ್ಷಣವೇ ಮಾನವ ಸಂಪನ್ಮೂಲವನ್ನು ಹೆಚ್ಚಿಸಬೇಕು. ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಿ, ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕೆಂದು ಸ್ಥಳೀಯ ನಿವಾಸಿಗಳು ಆಕ್ರೋಶಭರಿತರಾಗಿ ಒತ್ತಾಯಿಸಿದ್ದಾರೆ.
