Uncategorized

ನಿಪ್ಪಾಣಿಯಲ್ಲಿ ಶೀಘ್ರದಲ್ಲೇ ಪಿಎಂ ಆವಾಸ್ ಯೋಜನೆಯ 1021 ಮನೆಗಳ ವಿತರಣೆ,ಯಾವುದೇ ಫಲಾನುಭವಿಗೆ ಅನ್ಯಾಯವಾಗುವುದಿಲ್ಲ – ಶಾಸಕಿ ಶಶಿಕಲಾ ಜೊಲ್ಲೆ ಭರವಸೆ

Share

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡ, ನಿರಾಶ್ರಿತ ಮತ್ತು ಅಗತ್ಯವಿರುವ ನಾಗರಿಕರಿಗೆ ಸ್ವಂತ ಮನೆ ಒದಗಿಸಲು ನಾವು ಬದ್ಧರಾಗಿದ್ದು, ಯಾವುದೇ ಅರ್ಹ ಫಲಾನುಭವಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ‘ಪ್ರತಿಯೊಬ್ಬರಿಗೂ ಮನೆ’ ಎಂಬ ಕನಸನ್ನು ನನಸು ಮಾಡಲು ನಿಪ್ಪಾಣಿ ಕ್ಷೇತ್ರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.

ನಿಪ್ಪಾಣಿ ನಗರಸಭೆ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.ನಿಪ್ಪಾಣಿ ನಗರಸಭೆ ಮತ್ತು ಕಂದಾಯ ಇಲಾಖೆ ವತಿಯಿಂದ ಅರ್ಜಿದಾರರ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, 1021 ಅರ್ಹ ಫಲಾನುಭವಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಎಲ್ಲಾ ಫಲಾನುಭವಿಗಳಿಗೆ ಶೀಘ್ರದಲ್ಲೇ ಲಾಟರಿ ಪದ್ಧತಿಯ ಮೂಲಕ ಮನೆಗಳನ್ನು ವಿತರಿಸಲಾಗುವುದು,” ಎಂದರು.

ಮನೆಗಳ ಹಂಚಿಕೆಯನ್ನು ಸಂಪೂರ್ಣ ಪಾರದರ್ಶಕವಾಗಿ ಮಾಡಲಾಗುವುದು. ಸರ್ಕಾರದ ನಿಯಮಾವಳಿಗಳ ಪ್ರಕಾರ ವೃದ್ಧರು ಮತ್ತು ದಿವ್ಯಾಂಗ ಫಲಾನುಭವಿಗಳಿಗೆ ನೆಲಮಹಡಿಯ ಮನೆಗಳನ್ನು ಆದ್ಯತೆಯ ಮೇರೆಗೆ ನೀಡಲಾಗುವುದು. ಸಂಬಂಧಪಟ್ಟ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಇದಲ್ಲದೆ, ಇನ್ನೂ ಸುಮಾರು 200 ಮನೆಗಳು ಲಭ್ಯವಿದ್ದು, ಮನೆ ಪಡೆಯಲು ಇಚ್ಛಿಸುವ ನಾಗರಿಕರು ಅರ್ಜಿ ಸಲ್ಲಿಸಿ ಅಗತ್ಯ ಶುಲ್ಕವನ್ನು ಪಾವತಿಸಬೇಕು ಎಂದು ಅವರು ಇದೇ ವೇಳೆ ತಿಳಿಸಿದರು.ವಿರೋಧ ಪಕ್ಷದವರು ನಿಪ್ಪಾಣಿಯ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ನಿಪ್ಪಾಣಿಯ ಜನತೆಗೆ ನಮ್ಮ ಮೇಲೆ ನಂಬಿಕೆಯಿದೆ ಮತ್ತು ಮುಂಬರುವ ದಿನಗಳಲ್ಲಿ ಸಾರ್ವಜನಿಕರೇ ವಿರೋಧ ಪಕ್ಷದವರಿಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ತಾಯಿ-ಸಹೋದರಿಯರು ಸೇರಿದಂತೆ ಎಲ್ಲಾ ಅರ್ಹ ಕುಟುಂಬಗಳಿಗೆ ಅವರ ಹಕ್ಕಿನ ಮನೆಗಳನ್ನು ಒದಗಿಸಿಕೊಡಲು ತಾವು ವಚನಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ್ ಮುಂಜೆ, ಬಿಜೆಪಿ ನಗರಾಧ್ಯಕ್ಷ ರಾಜು ಗುಂದೇಶಾ, ಮಾಜಿ ನಗರಾಧ್ಯಕ್ಷ ಜಯವಂತ ಭಾಟ್ಲೆ, ಹಾಲ್ ಶುಗರ್ಸ್ ಉಪಾಧ್ಯಕ್ಷೆ ಸುನಿತಾ ಪಾಟೀಲ್, ಮಾಜಿ ನಗರಸಭೆ ಸದಸ್ಯರಾದ ಸಂತೋಷ್ ಸಾಂಗಾವ್ಕರ್, ಸುನಿಲ್ ಪಾಟೀಲ್, ಬಂಡಾ ಘೋರ್ಪಡೆ, ದತ್ತಾತ್ರೇಯ ಜೋತ್ರೆ, ಸಾಗರ ಮಿರ್ಜೆ, ವಿಜಯ್ ತವಳೆ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!