Politics

ಕಾಗವಾಡ ನ್ಯಾಯಾಲಯದಲ್ಲಿ ಜುಲೈ 11ರಂದು ಬೃಹತ್ ಲೋಕ ಅದಾಲತ್: ಸದುಪಯೋಗ ಪಡಿಸಿಕೊಳ್ಳಲು ನ್ಯಾಯಾಧೀಶರ ಕರೆ

Share

ಬರುವ ಜುಲೈ 11ರಂದು ಕಾಗವಾಡ ತಾಲ್ಲೂಕಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್ ಜರುಗಲಿದ್ದು, ಕಕ್ಷಿದಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ರೂಪಾ ಚಿನಿವಾರ ಹೇಳಿದರು.

ಅವರು ಸೋಮವಾರ ಸಂಜೆ ಕಾಗವಾಡ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಲೋಕ ಅದಾಲತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲ್ಲೂಕಿನ ಎಲ್ಲ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ವಿವರಣೆ ನೀಡಿದರು.

ಜುಲೈ 11ರಂದು ಜರುಗುವ ಲೋಕ ಅದಾಲತ್‌ನಲ್ಲಿ 1040 ಸಿವಿಲ್ ದಾವೆಗಳು ಹಾಗೂ ಸುಮಾರು 1600 ಕ್ರಿಮಿನಲ್ ದಾವೆಗಳು ಚರ್ಚೆಯಾಗಲಿವೆ. ಕಕ್ಷಿದಾರರು ತಾವು ದಾಖಲಿಸಿದ ದಾವೆಗಳಲ್ಲಿ ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ದಾವೆಗಳು ಮತ್ತು ಜನ್ಮ ದಾಖಲೆಗಾಗಿ ಸಲ್ಲಿಸಿದ ಅರ್ಜಿಗಳನ್ನು ಚರ್ಚಿಸಲಾಗುವುದು. ಇತರೆ ದಾವೆಗಳ ಬಗ್ಗೆ ರಾಜಿ ಸಂಧಾನ ಮಾಡಿಕೊಳ್ಳಲು ಇದು ಒಳ್ಳೆಯ ಅವಕಾಶವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಪೊಲೀಸ್ ಇಲಾಖೆಯ ಕೆ.ಪಿ. ಆ್ಯಕ್ಟ್ ಕಾಯ್ದೆಯ ಬಗ್ಗೆ ವಿವರಿಸಿದ ಅವರು, ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಹಾಗೂ ರಸ್ತೆ ಸುಧಾರಣೆ ಕ್ರಮಗಳ ಜಾರಿಗೆ ಸೂಚಿಸಿದರು. ತಹಶೀಲ್ದಾರ್ ಇಲಾಖೆಗೆ ಜನ್ಮ ದಾಖಲೆ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆಯೂ ಸೂಕ್ತ ಸೂಚನೆ ನೀಡಿದರು.

ಸಭೆಯಲ್ಲಿ ಉಪ ತಹಶೀಲ್ದಾರ್ ವಿಜಯಕುಮಾರ್ ಚೌಗಲೆ, ಎ.ಎಸ್.ಐ. ಎಸ್.ವಿ. ಹಂಜಿ, ಉಗಾರ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ಕವಲಾಪೂರ್, ಸಿ.ಡಿ.ಪಿ.ಒ. ರವೀಂದ್ರ ಗುದಿಗೆಣ್ಣವರ್, ಆರ್.ಬಿ. ದರೂರ್, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ಬಿ. ನಾಂದ್ರೆ, ಕಾರ್ಯದರ್ಶಿ ಎಂ.ಜಿ. ವಡ್ಡರ್, ಬಿ.ಜೆ. ಮೋಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
– ಸುಕುಮಾರ್ ಬನ್ನೂರೆ, ಇನ್ ನ್ಯೂಸ್ ಕಾಗವಾಡ

Tags:

error: Content is protected !!