Politics

“ಆರ್.ಎಸ್.ಎಸ್ ವಿರುದ್ಧ ಈಜಲು ಹೋಗಬೇಡಿ”: ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ತಿರುಗೇಟು!

Share

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ನೋಟಿಸ್ ಜಾರಿ ಮಾಡಿರುವ ಗೃಹಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್.ಎಸ್.ಎಸ್ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ, ಹೀಗಿರುವಾಗ ಲೆಕ್ಕ ಕೇಳಲು ಖರ್ಗೆಗೆ ಯಾವುದೇ ಅರ್ಹತೆಯಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಸಾ ಬಾಂಡಗೆ, “ಸರ್ಕಾರದಿಂದ ಆರ್,ಎಸ್,ಎಸ್ ಯಾವುದೇ ಅನುದಾನ ಪಡೆದಿಲ್ಲ. ಒಂದು ವೇಳೆ ಅನುದಾನ ಪಡೆದು ಅದರಲ್ಲಿ ಅಕ್ರಮವಾಗಿದ್ದರೆ ಖರ್ಗೆ ಅವರು ಕೇಳಲಿ. ಯಾವುದೇ ಧರ್ಮಗಳು ನೋಂದಣಿಯಾಗಿರುವುದಿಲ್ಲ. ಇತಿಹಾಸದಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್‌ನ ಯಾವ ನಾಯಕನೂ ಕೇಳದ ಇಂತಹ ಪ್ರಶ್ನೆಯನ್ನು ಪ್ರಿಯಾಂಕ್ ಖರ್ಗೆ ಕೇಳುತ್ತಿದ್ದಾರೆ. ಇದನ್ನೇ ಅವರು ದೊಡ್ಡ ಉದ್ಯೋಗ ಮಾಡಿಕೊಂಡಂತಿದೆ. ಆರ್,ಎಸ್,ಎಸ್ ಬಗ್ಗೆ ಮಾತನಾಡಲು ಕನಿಷ್ಠ ಅರ್ಹತೆಯಾದರೂ ಇರಬೇಕು. ಪ್ರವಾಹದ ವಿರುದ್ಧ ಈಜಲು ಹೋಗಬೇಡಿ, ಆರ್ಎಸ್ಎಸ್ ವಿರುದ್ಧ ಹೋರಾಡುವ ಶಕ್ತಿ ಜಗತ್ತಿನ ಯಾವುದೇ ಸರ್ಕಾರಕ್ಕೂ ಇಲ್ಲ” ಎಂದು ಎಚ್ಚರಿಸಿದರು.

ಖರ್ಗೆ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಅವರು, “ನಿಮ್ಮ ಕ್ಷೇತ್ರವಾದ ಚಿತ್ತಾಪುರದಲ್ಲಿ 50 ವರ್ಷಗಳಿಂದ ನಿಮ್ಮವರೇ ಶಾಸಕರಾಗಿದ್ದಾರೆ, ಮೊದಲು ಅಲ್ಲಿನ ಅಭಿವೃದ್ಧಿಯತ್ತ ಗಮನಹರಿಸಿ. ಚಿತ್ತಾಪುರದಲ್ಲಿ ಆರ್,ಎಸ್,ಎಸ್ ಪಥಸಂಚಲನಕ್ಕೆ ನೀವು ಬಿಡದಿದ್ದಾಗ, ನಾವು ಕೋರ್ಟ್ ಮೂಲಕ ಅನುಮತಿ ಪಡೆದು ನಡೆಸಿದ್ದೇವೆ. ನಮಗೆ ನೋಟಿಸ್ ನೀಡುವ ಮುನ್ನ ನಿಮ್ಮ ಸರ್ಕಾರದ ಭ್ರಷ್ಟಾಚಾರದ ಲೆಕ್ಕವನ್ನು ಮೊದಲು ಕೊಡಿ. ಪ್ರಿಯಾಂಕ್ ಖರ್ಗೆಗೆ ನಾನು ಪತ್ರ ಬರೆದು ಸುಮ್ಮನೆ ಅವರಿಗೆ ಪ್ರಚಾರ ಕೊಟ್ಟೆ ಅನಿಸುತ್ತಿದೆ, ಅವರಿಗೆ ಉತ್ತರಿಸುವಷ್ಟು ದೊಡ್ಡವನು ನಾನಲ್ಲ ಮತ್ತು ಅವರಿಗೆ ಆ ಯೋಗ್ಯತೆಯೂ ಇಲ್ಲ” ಎಂದು ಬಾಂಡಗೆ ಲೇವಡಿ ಮಾಡಿದರು.

Tags:

error: Content is protected !!