Bagalkot

ಪ್ರೊ. ಭಗವಾನ್ ವಿರುದ್ಧ ವಿ.ಎಸ್. ಉಗ್ರಪ್ಪ ಕೆಂಡಾಮಂಡಲ; ರಾಮಾಯಣದ ಬಗ್ಗೆ ಉಢಾಫೆ ಮಾತು ನಿಲ್ಲಿಸದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ!

Share

ರಾಮಾಯಣ ಹಾಗೂ ಮಹರ್ಷಿ ವಾಲ್ಮೀಕಿ ಕುರಿತು ಪ್ರೊ. ಕೆ.ಎಸ್. ಭಗವಾನ್ ಹರಿಹರದಲ್ಲಿ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಬಾಗಲಕೋಟೆಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಗವಾನ್ ಅವರ ಬೇಜವಾಬ್ದಾರಿ ಮಾತುಗಳು ಅಕ್ಷಮ್ಯ ಅಪರಾಧವಾಗಿದ್ದು, ಸಮಸ್ತ ಜನತೆಗೆ ಮಾಡಿದ ಅಪಮಾನ ಎಂದು ಕಿಡಿಕಾರಿರುವ ಉಗ್ರಪ್ಪ, ಸರ್ಕಾರ ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿ.ಎಸ್. ಉಗ್ರಪ್ಪ, “ಮಿಸ್ಟರ್ ಭಗವಾನ್, ನೀನು ರಾಮಾಯಣವನ್ನು ಎಷ್ಟು ಬಾರಿ ಓದಿದ್ದೀಯಾ? ಕೇವಲ ಶಂಭುಕನ ಪ್ರಕರಣ ಇಟ್ಟುಕೊಂಡು ಮನಸೋಇಚ್ಛೆ ಮಾತನಾಡುತ್ತೀಯಲ್ಲ, ನಿನಗೆ ನಾಚಿಕೆಯಾಗಬೇಕು” ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ಮುಂದುವರಿದು, “೭ ಸಾವಿರ ವರ್ಷಗಳ ಇತಿಹಾಸವಿರುವ ರಾಮಾಯಣದಲ್ಲಿ ೨೪ ಸಾವಿರ ಶ್ಲೋಕಗಳು ಹಾಗೂ ೫೦೦ ಸರ್ಗಗಳಿವೆ ಎನ್ನುವುದು ನಿನಗೆ ಗೊತ್ತಿದೆಯೇ? ಮಹಾತ್ಮ ಗಾಂಧೀಜಿಯವರು ಜಾತಿರಹಿತ, ವರ್ಗ ರಹಿತ, ಶೋಷಣೆ ಮುಕ್ತ ಸಮ ಸಮಾಜದ ಸಂದೇಶವಿರುವ ಕಾರಣಕ್ಕೇ ರಾಮರಾಜ್ಯವನ್ನು ಬಯಸಿದ್ದರು. ಇಂತಹ ಸಮಾಜಮುಖಿ ಕಾವ್ಯದ ಅರಿವಿಲ್ಲದೆ ವಾಲ್ಮೀಕಿ ಮಹರ್ಷಿ ಹಾಗೂ ಅವರ ವಂಶಸ್ಥರಿಗೆ ಅಗೌರವ ತೋರಿದರೆ ಮುಂದಿನ ದಿನಗಳಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಭಗವಾನ್‌ಗೆ ಕಠಿಣ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯತ್ತ ಮುಖ ಮಾಡಿದ ಉಗ್ರಪ್ಪ, ಪ್ರಸ್ತುತ ರಾಮನ ಜಪ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು. “ದೇಶದಲ್ಲಿ ಈಗ ರಾಮನ ಜಪ ಮಾಡುತ್ತಿರುವವರು ಕಳೆದ ಹತ್ತು ವರ್ಷಗಳಲ್ಲಿ ೧೬೦ ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ೧೯೪೭ ರಿಂದ ೨೦೧೪ ರವರೆಗೆ ದೇಶದ ಒಟ್ಟು ಸಾಲ ಕೇವಲ ೫೨ ಲಕ್ಷ ಕೋಟಿಯಷ್ಟಿತ್ತು. ದೇಶಕ್ಕೆ ಮತ್ತು ರಾಜ್ಯಕ್ಕೆ ಯಾವುದೇ ಕೊಡುಗೆ ನೀಡದ ಭಗವಾನ್, ಇಂತಹ ಗಂಭೀರ ವಿಷಯಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು, ಪದೇ ಪದೇ ರಾಮಾಯಣದ ಬಗ್ಗೆ ಉಢಾಫೆ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಇಂತಹ ಸಮಾಜದ ಶಾಂತಿ ಕದಡುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.

Tags:

error: Content is protected !!