ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿದ ಅಮಾಯಕರ ಮೇಲೆ ಕೇಸ್ ದಾಖಲಿಸಿದ ಇಲಕಲ್ ನಗರಸಭೆ ಮತ್ತು ಪೊಲೀಸರ ದರ್ಪದ ವಿರುದ್ಧ ‘ಇನ್ ನ್ಯೂಸ್’ ಬಿತ್ತರಿಸಿದ ವರದಿ ಈಗ ಭಾರಿ ಸಂಚಲನ ಸೃಷ್ಟಿಸಿದೆ.
‘ಇನ್ ನ್ಯೂಸ್’ ವರದಿಯ ಬೆನ್ನಲ್ಲೇ ಎಚ್ಚೆತ್ತಿರುವ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಇಂದು ನೇರವಾಗಿ ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಕಚೇರಿಗೆ ಭೇಟಿ ನೀಡಿ ಆಕ್ರೋಶ ಹೊರಹಾಕಿದ್ದಾರೆ. ಶಾಸಕ ಕಾಶಪ್ಪನವರ ಕುಮ್ಮಕ್ಕಿನಿಂದಲೇ ಈ ಕೇಸ್ ದಾಖಲಾಗಿದೆ ಎಂದು ಆರೋಪಿಸಿರುವ ಅವರು, ತಕ್ಷಣ ಕೇಸ್ ಹಿಂಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಇಲಕಲ್ಲ ನಗರಸಭೆಯಲ್ಲಿ ಕುಡಿಯುವ ನೀರಿಗಾಗಿ ಹಕ್ಕೊತ್ತಾಯ ಮಂಡಿಸಿ ಪ್ರತಿಭಟನೆ ನಡೆಸಿದ್ದ ಸಾರ್ವಜನಿಕರ ಮೇಲೆ ಪ್ರಕರಣ ದಾಖಲಿಸಿರುವ ಘಟನೆಗೆ ‘ಇನ್ ನ್ಯೂಸ್’ ತಾರ್ಕಿಕ ಅಂತ್ಯ ಹಾಡಲು ಮುಂದಾಗಿದೆ. ಈ ಅನ್ಯಾಯದ ವಿರುದ್ಧ ವಾಹಿನಿ ಧ್ವನಿ ಎತ್ತುತ್ತಿದ್ದಂತೆ ಎಚ್ಚೆತ್ತ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಇಂದು ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಗರಂ ಆದರು. “ಜನರು ಕುಡಿಯುವ ನೀರು ಕೇಳಿದರೆ ಅವರ ಮೇಲೆ ಕೇಸ್ ಹಾಕುವುದು ಎಷ್ಟು ಸರಿ? ಹನಿ ನೀರಿಗೂ ಜನರನ್ನು ಪರದಾಡುವಂತೆ ಮಾಡಿರುವ ನಗರಸಭೆ ಪೌರಾಯುಕ್ತರ ಮೇಲೆ ಮೊದಲು ಕ್ರಮ ಕೈಗೊಳ್ಳಿ” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಸ್ಥಳೀಯ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಗಂಭೀರ ವಾಗ್ದಾಳಿ ನಡೆಸಿದ ದೊಡ್ಡನಗೌಡ ಪಾಟೀಲ್, ಶಾಸಕರ ನೇರ ಕುಮ್ಮಕ್ಕಿನಿಂದಲೇ ಪ್ರತಿಭಟನಾಕಾರರ ಮೇಲೆ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದು ಆಪಾದಿಸಿದರು. ಈ ಹಿಂದೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಾದರೆ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಸ್ವತಃ ಡಿಸಿ ಸಂಗಪ್ಪ ಅವರೇ ಹೇಳಿದ್ದರು. ಆದರೆ ಈಗ ನೀರು ಕೇಳಿದವರನ್ನೇ ಅಪರಾಧಿಗಳನ್ನಾಗಿ ಮಾಡಿರುವುದು ಖಂಡನೀಯ. ತಕ್ಷಣವೇ ಈ ರಾಜಕೀಯ ಪ್ರೇರಿತ ಕೇಸ್ಗಳನ್ನು ಹಿಂಪಡೆಯದಿದ್ದರೆ ಇಡೀ ಇಲಕಲ್ ನಗರವನ್ನು ಸ್ತಬ್ಧಗೊಳಿಸಿ ಬೃಹತ್ ಹೋರಾಟ ಮಾಡುವುದಾಗಿ ಮಾಜಿ ಶಾಸಕರು ಎಚ್ಚರಿಕೆ ನೀಡಿದ್ದಾರೆ.
