ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನ ಪರಾಕಾಷ್ಠೆ ತಲುಪಿದೆ. ಹಣ ಕೊಟ್ಟರೂ ಮೂರು ವರ್ಷಗಳಿಂದ ವಿದ್ಯುತ್ ನೀಡದೆ ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಇದೀಗ ಲೋಕಾಪುರ ಹೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಲ್ಲಾಪುರ ಟಿ.ಎಲ್. ತೋಟ ಹಾಗೂ ಸುತ್ತಮುತ್ತಲಿನ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ಕಳೆದ ಮೂರು ವರ್ಷಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಸಂಜೆಯಾಗುತ್ತಲೇ ಇಡೀ ಪ್ರದೇಶ ಕತ್ತಲಲ್ಲಿ ಮುಳುಗುತ್ತಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕಡುಕಷ್ಟದ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದಾಗ, “ನೀವೇ ದುಡ್ಡು ಕೊಟ್ಟು ಸಿಂಗಲ್ ಫೇಸ್ ಲೈನ್ ಪಡೆದುಕೊಳ್ಳಿ” ಎಂದು ಅಧಿಕಾರಿಗಳು ಉದ್ಧಟತನದ ಸಲಹೆ ನೀಡಿದ್ದರು. ಅಧಿಕಾರಿಗಳ ಮಾತನ್ನು ನಂಬಿದ ಬಡ ಗ್ರಾಮಸ್ಥರು ತಾವೇ ಸ್ವತಃ ಮೂರು ಲಕ್ಷ ರೂಪಾಯಿ ಹಣವನ್ನು ಒಟ್ಟುಗೂಡಿಸಿ ಹೆಸ್ಕಾಂ ಅಧಿಕಾರಿಗಳಿಗೆ ನೀಡಿದ್ದರೂ ಸಹ, ಇಂದಿನವರೆಗೂ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಈ ಘೋರ ನಿರ್ಲಕ್ಷ್ಯವನ್ನು ಖಂಡಿಸಿ ಹಾಗೂ ಮಲ್ಲಾಪುರ ಪಿ.ಎಲ್. ಲೈನ್ಮನ್ನನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಪಟ್ಟು ಹಿಡಿದು 30ಕ್ಕೂ ಹೆಚ್ಚು ಕುಟುಂಬಗಳ ಗ್ರಾಮಸ್ಥರು ಲೋಕಾಪುರ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿದ್ದಾರೆ. ಲೋಕಾಪುರ ಹೆಸ್ಕಾಂ ಕಚೇರಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಇನ್ನಾದರೂ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣವೇ ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಸತ್ಯಾಗ್ರಹ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ.
